ನ್ಯೂಸ್

Success Story: ಬೇಡಿಕೆಯ ಬೆಳೆ ಮಾಡಿ 4 ತಿಂಗಳಲ್ಲಿ 3 ಕೋಟಿ ರೂಪಾಯಿ ಸಂಪಾದಿಸಿದ ರೈತ!

ಲಖನೌ: ಕೃಷಿ ಲಾಭದಾಯಕವಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ರೈತ ಸಾಂಪ್ರದಾಯಿಕ ಬೆಳೆಗೆ ತಿಲಾಂಜಲಿ ಹೇಳಿ ಮಾರುಕಟ್ಟೆಲ್ಲಿ ಬೇಡಿಕೆ ಇರುವ ಬೆಳೆ ಮಾಡಿ ಕೇವಲ ನಾಲ್ಕೇ ತಿಂಗಳಲ್ಲಿ 3 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದಾನೆ.

ಉತ್ತರ ಪ್ರದೇಶದ ಶಹಜಹಾನ್‌ಪುರದ ಪುವಾಯನ್ ತೆಹಸಿಲ್‌ನ ಪ್ರಗತಿಪರ ಯುವ ರೈತ ದೀಪಕ್ ತನ್ನ 10 ಎಕರೆ ಜಮೀನಿನಲ್ಲಿ ಕಳೆದ ಎರಡು ವರ್ಷಗಳಿಂದ ಸೋರೆಕಾಯಿ, ಕಲ್ಲಂಗಡಿ ಕೃಷಿ ಮಾಡುತ್ತಿದ್ದಾರೆ. ಆರಂಭದಲ್ಲಿ 10 ಎಕರೆ ಕೃಷಿ ಮಾಡಿದ್ದ ದೀಪಕ್, ಈ ಬಾರಿ ಗ್ರಾಮದಲ್ಲಿ 356 ಎಕರೆ ಜಮೀನನ್ನು ರೈತರಿಂದ ಗುತ್ತಿಗೆ ಪಡೆದಿದ್ದಾರೆ.

ಈ ಭಾಗದ ರೈತರು ಹೆಚ್ಚಾಗಿ ಆಲೂಗಡ್ಡೆ ಬೆಳೆಯುತ್ತಾರೆ. ಈ ಬೆಳೆ ಕಟಾವು ಮಾಡಿ ರೈತರ ಹೊಲ ಖಾಲಿಯಾಗಿದ್ದರಿಂದ ದೀಪಕ್​ 4 ತಿಂಗಳ ಕಾಲ ಗುತ್ತಿಗೆ ಪಡೆದು ಕುಂಬಳಕಾಯಿ, ಕಲ್ಲಂಗಡಿ ಬೆಳೆಗಳನ್ನು ಕೃಷಿ ಮಾಡಿದ್ದರು.

ಇದಕ್ಕಾಗಿ ದೀಪಕ್ ಥಾಯ್ಲೆಂಡ್ ಮತ್ತು ತೈವಾನ್‌ನಿಂದ ಗುಣಮಟ್ಟದ ಕಲ್ಲಂಗಡಿ ಮತ್ತು ಕುಂಬಳಕಾಯಿ ಬೀಜಗಳನ್ನು ತರಿಸಿ ಬಿತ್ತನೆ ಮಾಡಿದರು. ಕಲ್ಲಂಗಡಿ ಬೆಳೆ ಎಕರೆಗೆ 150-200 ಕ್ವಿಂಟಲ್ ಇಳುವರಿ ಬಂದಿದೆ. ಬಳಿಕ ದೀಪಕ್ ಉತ್ತರ ಪ್ರದೇಶದ 40-50 ಮಂಡಿಗಳು, ಉತ್ತರಾಖಂಡದ 20 ಮಂಡಿಗಳು, ಬಿಹಾರದ ಹಲವು ಜಿಲ್ಲೆಗಳಿಗೆ ಕಲ್ಲಂಗಡಿ ಸರಬರಾಜು ಮಾಡಿದರು. ಕೆಲ ಹಣ್ಣಿನ ವ್ಯಾಪಾರಿಗಳು ನೇರವಾಗಿ ದೀಪಕ್ ಅವರನ್ನು ಸಂಪರ್ಕಿಸಿ ಆರ್ಡರ್ ಪಡೆದು ಹಣ್ಣುಗಳನ್ನು ಕಟಾವು ಮಾಡಿ ತೆಗೆದುಕೊಂಡು ಹೋದರು.

ಕಲ್ಲಂಗಡಿ ಕೃಷಿ ಮಾಡಿದ್ದ ದೀಪಕ್ ಒಟ್ಟಾರೆ ಗಳಿಸಿದ್ದು 3 ಕೋಟಿ ರೂ.. ಇದಲ್ಲದೆ, ಅವರು ಈ ನಾಲ್ಕು ತಿಂಗಳಲ್ಲಿ ಸುಮಾರು 400-500 ಜನರಿಗೆ ಉದ್ಯೋಗವನ್ನು ಒದಗಿಸಿದರು. ಬೇಸಿಗೆಯಲ್ಲಿ ಕಲ್ಲಂಗಡಿ ಮತ್ತು ಕುಂಬಳಕಾಯಿ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟವಾಗುತ್ತವೆ. ಇಂತಹ ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯ ಗಳಿಸಬಹುದು ಎನ್ನುತ್ತಾರೆ ದೀಪಕ್​.