ಲಖನೌ: ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಆಹಾರ ಮಾರಾಟ ಮಾಡುವ ಅಂಗಡಿಗಳಲ್ಲಿ ಮಾಲೀಕರ ಹೆಸರು ಹಾಗೂ ಅಲ್ಲಿ ಕೆಲಸ ಮಾಡುವವರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ (ಜುಲೈ 19) ಆದೇಶಿಸಿದ್ದಾರೆ. ಈ ಹಿಂದೆ ಮುಜಫರ್‌ನಗರ ಪೊಲೀಸರು ಈ ರೀತಿ ಆದೇಶ ಹೊರಡಿಸಿದ್ದರು, ಆದರೆ ಪ್ರತಿಪಕ್ಷಗಳು ಇದನ್ನು ತೀವ್ರವಾಗಿ ವಿರೋಧಿಸಿದ ನಂತರ ಆದೇಶವನ್ನು ಹಿಂತೆಗೆದುಕೊಂಡರು. ಈಗ ಅದೇ ಆದೇಶವನ್ನು ಎತ್ತಿಹಿಡಿಯಲು ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ.
ಹೊಸ ನಿರ್ದೇಶನದ ಪ್ರಕಾರ, ಪ್ರತಿ ಆಹಾರ ಅಂಗಡಿ ಅಥವಾ ಪೆಟ್ಟಿಗೆ ಅಂಗಡಿಗಳು ಮಾಲೀಕರ ಹೆಸರನ್ನು ಬೋರ್ಡ್‌ನಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಯಾತ್ರಿಕರ ವಿಶ್ವಾಸಗಳನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಎಂಒ ಕಚೇರಿ ಮೂಲಗಳು ತಿಳಿಸಿವೆ. ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನಿಂದ ತಿನ್ನಲು ಬಯಸುವ ಉಪವಾಸ ಮಾಡುವ ಹಿಂದೂಗಳಿಗೆ ಇಂತಹ ಕ್ರಮವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಮುಜಫರ್‌ನಗರ ಪೊಲೀಸರು ಈ ಹಿಂದೆ ಆದೇಶವನ್ನು ಹೊರಡಿಸಿದಾಗ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷ ಮತ್ತು ಆಡಳಿತಾರೂಢ ಎನ್‌ಡಿಎ ನಾಯಕರು ಈ ಆದೇಶವು ವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಅಂಗಡಿಗಳ ಮಾಲೀಕರ ಹೆಸರನ್ನು ಪ್ರದರ್ಶಿಸುವ ಆದೇಶ ಅಸ್ಪೃಶ್ಯತೆಗೆ ಕಾರಣವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟಿದ್ದಾರೆ. ಕೆಲವು ಉತ್ಸಾಹವಿಲ್ಲದ ಅಧಿಕಾರಿಗಳ ಆದೇಶಗಳು ಅಸ್ಪೃಶ್ಯತೆಯ ಕಾಯಿಲೆಗೆ ಕಾರಣವಾಗಬಹುದು. ನಂಬಿಕೆಯನ್ನು ಗೌರವಿಸಬೇಕು ಆದರೆ ಅಸ್ಪೃಶ್ಯತೆಯನ್ನು ಪಾಲನೆ ಮಾಡಬಾರದು ಎಂದು ನಖ್ವಿ ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಕನ್ವರ್ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಅದರಲ್ಲಿ ಗೌರವ ಮತ್ತು ನಂಬಿಕೆಯ ಬಗ್ಗೆ ಯಾರಿಂದಲೂ ಉಪನ್ಯಾಸಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)