ಮಂಡ್ಯ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಅಲ್ಲದೆ ಸ್ಟಾರ್ ಕ್ಯಾಂಪೇನರ್ಗಳು ಎಂದು ಗುರುತಿಸಿಕೊಂಡವರು ಇದೀಗ ಒಬ್ಬೊಬ್ಬರಾಗಿಯೇ ಬಂದು ತಮ್ಮ ತಮ್ಮ ಪಕ್ಷದ ಪರ ಮತಬೇಟೆಗೆ ಇಳಿಯುತ್ತಿದ್ದಾರೆ. ಇದೀಗ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಳೆ(ಏ.26) ಗೌಡರ ಭದ್ರಕೋಟೆಗೆ ಎಂಟ್ರಿ ಕೊಡುತ್ತಿದ್ದಾರೆ.
ಈ ಬಾರಿ ಬಿಜೆಪಿ ಒಕ್ಕಲಿಗರ ಮತಬೇಟೆಗೆ ಮುಂದಾಗಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಚಾರದ ಕಾರ್ಯಗಳು ಜೋರಾಗಿವೆ. ಇದೀಗ ಯೋಗಿ ಆದಿತ್ಯನಾಥ್ ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ಕೊಡುವ ಮೂಲಕ ಒಕ್ಕಲಿಗರ ಮತಕ್ಕೆ ಗಾಳ ಹಾಕಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಂಡ್ಯ ಜಿಲ್ಲೆಯ ಮೂಲಕ ಯೋಗಿ ಆದಿತ್ಯನಾಥ್ ಚುನಾವಣಾ ರಣಕಹಳೆ ಮೊಳಗಿಸಲಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಪ್ರಚಾರ ಮಾಡಲಿದ್ದಾರೆ. ಸಂಜಯ ವೃತ್ತದಿಂದ ಮಹಾವೀರ ವೃತ್ತದವರೆಗೆ ರೋಡ್ ಶೋನಲ್ಲಿ ಪಾಲ್ಗೊಂಡು, ಬಳಿಕ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಲಿದ್ದಾರೆ.