ಉನ್ನಾವೋ: ಮಹಿಳೆ ಮತ್ತು ಯುವಕನನ್ನು ಒಟ್ಟಿಗೆ ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಮಾಲುಖೇದಾದಲ್ಲಿ ನಡೆದಿದೆ. ಗ್ರಾಮಸ್ಥರು ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋ ನೆಟ್ಟಿಗರು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಷ್ಟೊಂದು ಅಮಾನವೀಯವಾಗಿ ನಡೆದುಕೊಳ್ಳುತ್ತಾರಾ? ನೀವೇನು ಮನುಷ್ಯರಾ? ರಾಕ್ಷಸರಾ? ಎಂದು ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಕೋಪಗೊಂಡ ಗ್ರಾಮಸ್ಥರು ನೆಲದ ಮೇಲೆ ಮಲಗಿರುವ ಪ್ರಜ್ಞಾಹೀನ ಜೋಡಿಯನ್ನು (ಸುರೇಶ್ ಮತ್ತು ಸೀಮಾ) ನಿಂದಿಸುವುದನ್ನು ವಿಡಿಯೋದಲ್ಲಿ ಕೇಳಬಹುದು. ಒಬ್ಬರನ್ನೊಬ್ಬರು ತಬ್ಬಿಕೊಂಡಿರುವಂತೆ ಜೋಡಿಯನ್ನು ಒಟ್ಟಿಗೆ ಕಟ್ಟಲಾಗಿದೆ. ಒಬ್ಬರ ಮೇಲೆ ಒಬ್ಬರು ಇರುವಾಗ ವ್ಯಕ್ತಿಯೊಬ್ಬ ಬಂದು ಇಬ್ಬರನ್ನು ಪಕ್ಕಕ್ಕೆ ದೂಡುತ್ತಾನೆ ಮತ್ತು ಮಹಿಳೆಯ ಮುಖದ ಮೇಲಿದ್ದ ಕೂದಲನ್ನು ಪಕ್ಕಕ್ಕೆ ಸರಿಸುವುದು ವಿಡಿಯೋದಲ್ಲಿದೆ.
ಗ್ರಾಮಸ್ಥರ ಪ್ರಕಾರ ಮಹಿಳೆಯು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಆಕೆ ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಮಾರ್ಚ್ 9ರ ರಾತ್ರಿ ಮಹಿಳೆ ಮತ್ತು ಪುರುಷನನ್ನು ಆಕೆಯ ಸಂಬಂಧಿಕರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೋಪಗೊಂಡ ಗ್ರಾಮಸ್ಥರು ಇಬ್ಬರನ್ನೂ ಕಟ್ಟಿಹಾಕಿದ್ದಾರೆ. ಮಾಹಿತಿ ಪಡೆದ ಉನ್ನಾವೋ ಪೊಲೀಸರು ಸ್ಥಳಕ್ಕೆ ಧಾವಿಸಿ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಿದ್ದಾರೆ.
ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿಒ ಬಿಘಾಪುರ ತಿಳಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)