ನ್ಯೂಸ್

ನಿಲ್ಲದ ಲೋನ್ ಆಪ್ಸ್ ಆಪತ್ತು!; 4,000ಕ್ಕೂ ಅಧಿಕ ಡಿಜಿಟಲ್ ಸಾಲದ ಆಪ್​ಗಳಿರುವ ಶಂಕೆ

ಕೀರ್ತಿನಾರಾಯಣ ಸಿ. ಬೆಂಗಳೂರು
ಮೂರು ವರ್ಷದ ಹಿಂದೆ ಅಪ್ಪಳಿಸಿದ ಕೋವಿಡ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನೇ ಲಾಭ ಮಾಡಿಕೊಂಡು ಹುಟ್ಟಿಕೊಂಡ ‘ಲೋನ್ ಆಪ್’ಗಳ ಹಾವಳಿ ಇನ್ನೂ ನಿಂತಿಲ್ಲ. ಕೆಲವೇ ನಿಮಿಷದಲ್ಲಿ ಸಾಲ ಕೊಟ್ಟು ಶೇ.30 ರಿಂದ ಶೇ.50ರವರೆಗೆ ಬಡ್ಡಿ ವಿಧಿಸುವ ಈ ಆಪ್​ಗಳು, ಸಾಲ ಮರುಪಾವತಿ ನಂತರವೂ ಸಾಲ ಪಡೆದವರ ಮಾನ ತೆಗೆದು ಅವರು ಜೀವ ಕಳೆದುಕೊಳ್ಳುವಷ್ಟು ಕಿರುಕುಳ ನೀಡುತ್ತಿವೆ.

ದೇಶಾದ್ಯಂತ ಈ ಅನಧಿಕೃತ ಆಪ್​ಗಳ ಜಾಲ ಹರಡಿವೆ. ಯಾರು? ಎಲ್ಲಿಂದ? ಹೇಗೆ? ನಿರ್ವಹಿಸುತ್ತಾರೆ ಎಂಬುದೇ ತಿಳಿಯದಂತೆ ಇಂಟರ್ನೆಟ್​ನಲ್ಲೇ ಡಿಜಿಟಲ್ ಸಾಲ ಕೊಟ್ಟು ಕಿರುಕುಳ ಕೊಡುತ್ತಾರೆ. ಸೈಬರ್ ಪೊಲೀಸರು, ಆರ್​ಬಿಐ ಹಾಗೂ ಬ್ಯಾಂಕ್​ಗಳು ಹಲವು ರೀತಿಯಲ್ಲಿ ಲೋನ್ ಆಪ್​ಗಳ ಜಾಲ ನಾಶಪಡಿಸಲು ಹಾಗೂ ವಂಚನೆಯಾಗದಂತೆ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡರೂ ಪೂರ್ಣಪ್ರಮಾಣದಲ್ಲಿ ಮಟ್ಟಹಾಕಲು ಸಾಧ್ಯ ವಾಗಿಲ್ಲ. ಗೂಗಲ್ ಸಂಸ್ಥೆ 2021ರಿಂದ 2022ರ ಜುಲೈವರೆಗೆ 3,500 ರಿಂದ 4,000 ಲೋನ್ ಆಪ್​ಗಳನ್ನು ಪರಿಶೀಲನೆ ನಡೆಸಿದೆ. ಇದರಲ್ಲಿ ಅನಧಿಕೃತ ಅಥವಾ ಅನುಮಾನಾಸ್ಪದ ಎಂದು ಕಂಡುಬಂದ 2,500 ಆಪ್​ಗಳನ್ನು ಪ್ಲೇ ಸ್ಟೋರ್​ನಿಂದ ಶಾಶ್ವತವಾಗಿ ತೆಗೆದು ಹಾಕಿದೆ.

ಆದರೆ, ಇದೇ ಆಪ್​ಗಳು ಸೋಷಿಯಲ್ ಮೀಡಿಯಾದ ಇನ್​ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್​ಬುಕ್ ವೇದಿಕೆಗಳಲ್ಲಿ ಮರುಸೃಷ್ಟಿಯಾಗಿ ವಂಚನೆಯಲ್ಲಿ ನಿರತವಾಗಿವೆ. ಭಾರತೀಯ ಸೈಬರ್ ಅಪರಾಧ ಕೇಂದ್ರ ಹಾಗೂ ಗೃಹ ಸಚಿವಾಲಯ ಸಾಲದ ಆಪ್​ಗಳ ಅಸಲಿಯತ್ತಿನ ಬಗ್ಗೆ ನಿಯಮಿತವಾಗಿ ವಿಶ್ಲೇಷಣೆ ಮಾಡುತ್ತಲೇ ಇದೆ. ಈ ವಿಶ್ಲೇಷಣೆ ವರದಿ ಹಾಗೂ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್​ನಲ್ಲಿ ದಾಖಲಾಗುವ ದೂರು ಆಧರಿಸಿ ಅನುಮಾನಾಸ್ಪದ ಆಪ್​ಗಳನ್ನು ಬ್ಲಾಕ್ ಮಾಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸೂಚನೆ ಕೊಡಲಾಗುತ್ತಿದೆ. ಇಷ್ಟೆಲ್ಲ ಎಚ್ಚರಿಕೆ ಕ್ರಮ ಕೈಗೊಂಡರೂ ವಂಚನೆ ಹಾಗೂ ಕಿರುಕುಳ ಮಾತ್ರ ತಪ್ಪಿಲ್ಲ.

ಇತ್ತೀಚಿನ ಆತ್ಮಹತ್ಯೆ ಕೇಸ್​ಗಳು

ಟಾರ್ಚರ್​ಗೆ ವಿದ್ಯಾರ್ಥಿ ಬಲಿ!: ಸಾಲದ ಆಪ್ ಕಿರುಕುಳಕ್ಕೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ಆರನೇ ಸೆಮಿಸ್ಟರ್ ಓದುತ್ತಿದ್ದ ಯಶಸ್ 2023ರ ಜುಲೈನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಗೆಳೆಯನ ಆರ್ಥಿಕ ಸಂಕಷ್ಟ ತೀರಿಸಲು ಲೋನ್ ಆಪ್​ಗಳಲ್ಲಿ ಸಾಲ ಪಡೆದಿದ್ದ. ಹಣ ಮರುಪಾವತಿ ಮಾಡದಿದ್ದಾಗ ಆಪ್​ಗಳಿಂದ ಕಿರುಕುಳ ಆರಂಭವಾಗಿತ್ತು.

ಕಬಡ್ಡಿ ಆಟಗಾರ ಆತ್ಮಹತ್ಯೆ: ಪುತ್ತೂರಿನ ಕಬಡ್ಡಿ ಆಟಗಾರ ಸ್ವರಾಜ್ ಎಂಬ ಯುವಕ ಕಳೆದ ಸೆಪ್ಟೆಂಬರ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಲ ಮರುಪಾವತಿಗೆ ನಾಳೆ ಮಧ್ಯಾಹ್ನವೇ ಡೆಡ್​ಲೈನ್ ಎಂದು ಆಪ್​ನವರು ಬ್ಲಾ್ಯಕ್​ವೆುೕಲ್ ಮಾಡಿದ್ದರಿಂದ ನೇಣು ಹಾಕಿಕೊಂಡಿದ್ದ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಚೇರಿಯಲ್ಲೇ ಯುವಕ ಸೂಸೈಡ್: 2022ರ ಜ.10ರಂದು ಸುಶಾಂತ್ ಎಂಬಾತ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಲೋನ್ ಆಪ್​ನವರು ಕರೆ ಮಾಡಿದರೆ ಮೃತಪಟ್ಟಿದ್ದಾಗಿ ಹೇಳಿ ಎಂದು ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದ.

ಟಾರ್ಚರ್ ಹೇಗೆ?: ಸಾಲ ಪಡೆದರೆ ಫೋನ್​ಗಳಲ್ಲಿರುವ ಎಲ್ಲ ಕಾಂಟ್ಯಾಕ್ಟ್ ಗಳು ಆಪ್ ಆಪರೇಟರ್​ಗೆ ಲಭ್ಯವಾಗುತ್ತವೆ. ?ಇಎಂಐ ಪಾವತಿ ವಿಳಂಬ ಅಥವಾ ಪಾವತಿಸಿದ ನಂತರವೂ ಕಿರುಕುಳ ಆರಂಭವಾಗುತ್ತದೆ. ?ಫೋನ್​ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್​ನ ಗ್ರೂಪ್ ಸೃಷ್ಟಿಸಿ, ಅಶ್ಲೀಲ ಫೋಟೋಗಳನ್ನು ಸೃಷ್ಟಿಸಿ ರವಾನೆ

ಆರ್​ಬಿಐ ವೈಟ್​ಲಿಸ್ಟ್!: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಈಗಾಗಲೇ ‘ವೈಟ್​ಲಿಸ್ಟ್’ ಲೋನ್ ಆಪ್​ಗಳ ಪಟ್ಟಿಯನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಂಡಿದೆ. ವೈಟ್​ಲಿಸ್ಟ್ ಎಂದರೆ ಕಾನೂನುಬದ್ಧವಾಗಿ ಸಾಲ ಕೊಟ್ಟು ವಸೂಲಿ ಮಾಡುವ ಆಪ್​ಗಳು. ಇವು ಆರ್​ಬಿಐನಲ್ಲಿ ನೋಂದಾಯಿತವಾಗಿವೆ. ಇದೇ ಪಟ್ಟಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಗೂಗಲ್​ನೊಂದಿಗೆ ಹಂಚಿಕೊಂಡಿದೆ. ಈ ಪಟ್ಟಿಯ ಲ್ಲಿರುವ ಆಪ್​ಗಳನ್ನು ಹೊರತುಪಡಿಸಿ ಉಳಿದ ಆಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆಗೆಯುವ ಕೆಲಸವನ್ನು ಗೂಗಲ್ ಮಾಡುತ್ತಿದೆ. ಇದಲ್ಲದೆ ಪ್ಲೇ ಸ್ಟೋರ್​ನಲ್ಲಿ ಸಾಲದ ಅಪ್ಲಿಕೇಶನ್​ಗಳ ಜಾರಿಗೊಳಿಸುವ ನೀತಿಯನ್ನು ಗೂಗಲ್ ನವೀಕರಿಸಿ, ಇನ್ನಷ್ಟು ಕಠಿಣ ಷರತ್ತುಗಳನ್ನು ವಿಧಿಸಿದೆ.

ಬ್ಯಾಂಕ್ ಕ್ರಮಗಳೇನು?

  • ವಂಚನೆ ತಡೆಯುವ ಉದ್ದೇಶದಿಂದ ಆರ್​ಬಿಐ ಎಲೆಕ್ಟ್ರಾನಿಕ್-ಬ್ಯಾಂಕಿಂಗ್ ಜಾಗೃತಿ ಮತ್ತು ತರಬೇತಿ (ಇ-ಬಾಟ್) ಯೋಜನೆ ರೂಪಿಸಿದೆ.
  • ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರದ (ಎನ್​ಸಿಎಫ್​ಇ) ಸಮನ್ವಯದೊಂದಿಗೆ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸೇರಿಸಲು ಆರ್ಥಿಕ ಶಿಕ್ಷಣದ ಚೌಕಟ್ಟು ರೂಪಿಸಲಾಗಿದೆ.
  • ಆರ್ಥಿಕ ಸಾಕ್ಷರತಾ ಸಪ್ತಾಹ ನಡೆಸಲಾಗುತ್ತಿದೆ. ಹಣಕಾಸು ಸಾಕ್ಷರತಾ ಕೇಂದ್ರಗಳು ಮತ್ತು ಗ್ರಾಮೀಣ ಶಾಖೆಗಳ ಮೂಲಕ ವಿಶೇಷ ಶಿಬಿರ ನಡೆಸಲು ಬ್ಯಾಂಕ್​ಗಳಿಗೆ ಸಲಹೆ ನೀಡಿದೆ.
  • ಸಾಮಾಜಿಕ ಜಾಲತಾಣಗಳ ಮೂಲಕ ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸುವುದು.

ನಕಲಿ ಆಪ್ ಪತ್ತೆ ಹೇಗೆ?

  • ಸಾಲ ಕೊಡುವ ಸಂಸ್ಥೆ ಆರ್​ಬಿಐನಡಿ ನೋಂದಣಿ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು
  • ಆಪ್​ನ ರೇಟಿಂಗ್/ರಿವ್ಯೂ ನೋಡಿ. ಇತರರು ಹಂಚಿಕೊಂಡ ಅಭಿಪ್ರಾಯಗಳನ್ನು ಪರಿಶೀಲಿಸಿ
  • ಮೊಬೈಲ್​ನ ಗ್ಯಾಲರಿ ಹಾಗೂ ಕಾಂಟ್ಯಾಕ್ಟ್ ಲಿಸ್ಟ್ ಸಂಪರ್ಕಕ್ಕೆ ಅನುಮತಿ ಕೇಳಿದರೆ ಕೊಡಬೇಡಿ