Unknown Facts : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ತಿಳಿಸಿಕೊಡುತ್ತೇವೆ.
ಕಪ್ಪೆಗಳೆಂದರೆ ಸಾಮಾನ್ಯವಾಗಿ ಯಾರೂ ಭಯ ಪಡುವುದಿಲ್ಲ. ಏಕೆಂದರೆ ಅವುಗಳು ಕಚ್ಚುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಅಲ್ಲದೆ, ಕಚ್ಚಿದರೂ ಕೂಡ ಪ್ರಾಣ ಹೋಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ, ಎಲ್ಲ ಕಪ್ಪೆಗಳು ನೀವು ಅಂದುಕೊಂಡ ರೀತಿ ಇರುವುದಿಲ್ಲ. ಕಪ್ಪೆಗಳಲ್ಲಿ ಕೆಲವೊಂದು ತುಂಬಾ ವಿಷಕಾರಿಯಾಗಿರುತ್ತವೆ. ಅವುಗಲ್ಲಿ "ಗೋಲ್ಡನ್ ಪಾಯ್ಸನ್ ಫ್ರಾಗ್ಸ್" ಜಾತಿಯ ಕಪ್ಪೆಗಳು ಕೂಡ ಒಂದು.
ಗೋಲ್ಡನ್ ಪಾಯ್ಸನ್ ಫ್ರಾಗ್ಸ್ ಚಿನ್ನದ ಬಣ್ಣದಿಂದ ಕೂಡಿರುವುದರಿಂದ ಈ ಹೆಸರು ಬಂದಿದೆ. ನೋಡಲು ಸುಂದರವಾಗಿ ಕಂಡರೂ ಅದರಲ್ಲಿರುವ ವಿಷಕ್ಕೆ ಹತ್ತು ಜನರನ್ನು ಕೊಲ್ಲುವಷ್ಟು ಸಾಮರ್ಥ್ಯವಿರುತ್ತದೆ. ಇನ್ನು ಶತಮಾನಗಳಿಂದ, ಕೊಲಂಬಿಯಾದಲ್ಲಿ ಬೇಟೆಗಾರರು ತಮ್ಮ ಬೇಟೆಯನ್ನು ಹಿಡಿಯಲು ಈ ರೀತಿಯ ಕಪ್ಪೆ ವಿಷವನ್ನು ಬಳಸುತ್ತಿದ್ದಾರೆ.
ನ್ಯಾಷನಲ್ ಜಿಯಾಗ್ರಫಿಕ್ ವರದಿಗಳ ಪ್ರಕಾರ, ಗೋಲ್ಡನ್ ಪಾಯ್ಸನ್ ಫ್ರಾಗ್ಸ್ ಏಕೆ ವಿಷಕಾರಿ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದಾಗ್ಯೂ, ಅವುಗಳ ವಿಷವು ಮುಖ್ಯವಾಗಿ ಸಸ್ಯಗಳು ಮತ್ತು ವಿಷಕಾರಿ ಕೀಟಗಳಿಂದ ಬರುತ್ತದೆ ಎಂದು ನಂಬಲಾಗಿದೆ. ಅಂದಹಾಗೆ, ಈ ಕಪ್ಪೆಗಳನ್ನು ಮುಟ್ಟುವುದು ಸಹ ಸಾವಿಗೆ ಕಾರಣವಾಗಬಹುದು.
ವೈದ್ಯಕೀಯ ಸಂಶೋಧನೆಯಲ್ಲಿ ತೊಡಗಿರುವ ಜನರು ವೈದ್ಯಕೀಯ ಕ್ಷೇತ್ರದಲ್ಲಿ ಈ ರೀತಿಯ ಕಪ್ಪೆಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಈ ಕಪ್ಪೆಗಳನ್ನು ಔಷಧಿಗಳನ್ನು ತಯಾರಿಸಲು ಬಳಸಬಹುದು ಎಂದು ವೈದ್ಯರು ನಂಬಿದ್ದಾರೆ. ವಿಜ್ಞಾನಿಗಳು ಈ ಕಪ್ಪೆಗಳ ಮೂಲಕ ಪರಿಣಾಮಕಾರಿಯಾದ ನೋವು ನಿವಾರಕ ಮಾತ್ರೆಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ.
ಈ ರೀತಿಯ ಕಪ್ಪೆಗಳಲ್ಲಿ 100 ಕ್ಕೂ ಹೆಚ್ಚು ಜಾತಿಗಳಿವೆ. ಅವುಗಳ ಸರಾಸರಿ ಉದ್ದವು ಒಂದು ಇಂಚಿಗಿಂತ ಹೆಚ್ಚು. ಹೆಚ್ಚಿನ ಕಪ್ಪೆ ಪ್ರಭೇದಗಳು ಕೊಲಂಬಿಯಾದ ಪೆಸಿಫಿಕ್ ಕರಾವಳಿಯಲ್ಲಿರುವ ಮಳೆಕಾಡಿನ ಸಣ್ಣ ಪ್ಯಾಚ್‌ನಲ್ಲಿ ವಾಸಿಸುತ್ತವೆ. ತಮಗೇನಾದರೂ ಅಪಾಯ ಎದುರಾದಾಗ ತಮ್ಮ ಚರ್ಮದಿಂದ ವಿಷ ಬಿಡುಗಡೆ ಮಾಡುತ್ತವೆ. ಆ ವಿಷವು ಮಾನವ ಚರ್ಮದೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ, ತುಂಬಾ ಮಾರಕವಾಗುತ್ತದೆ. ಅಂದರೆ, ಸಾವು ಸಂಭವಿಸುತ್ತದೆ.
ಇನ್ನು ಈ ಕಪ್ಪೆಗಳು ಸಣ್ಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸಬಹುದು. ಸಂಶೋಧಕರು ಹೇಳುವಂತೆ ಈ ಕಪ್ಪೆಗಳು ತಮ್ಮ ಪರಭಕ್ಷಕಗಳ ಮೇಲೆ ದಾಳಿ ಮಾಡಲು ವಿಷವನ್ನು ಬಳಸುತ್ತವೆ. ಅವು ಮುಖ್ಯವಾಗಿ ನೊಣಗಳು, ಇರುವೆಗಳು ಮತ್ತು ಗೆದ್ದಲುಗಳನ್ನು ತಿನ್ನುತ್ತವೆ. (ಏಜೆನ್ಸೀಸ್)