ನ್ಯೂಸ್

ಆಹಾರ, ನೀರಿಲ್ಲದೇ 30 ವರ್ಷ ಬದುಕಬಲ್ಲದು ಈ ಜೀವಿ: ಕುದಿಯುವ ನೀರು, ಬೆಂಕಿಗೆ ಎಸೆದ್ರೂ ಸಾಯುವುದಿಲ್ಲ! Unknown Facts

Unknown Facts : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ.

ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ಲಕ್ಷಣಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ತಿಳಿಸಿಕೊಡುತ್ತೇವೆ.

ಈ ಜಗತ್ತಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶಿಷ್ಟ ಲಕ್ಷಣಗಳಿವೆ. ಈ ನಮ್ಮ ಭೂಮಿಯಿಂದ ಮನುಷ್ಯರು ಕಣ್ಮರೆಯಾದ ನಂತರವೂ ಒಂದೇ ಒಂದು ಸಣ್ಣ ಜೀವಿ ಬದುಕುಳಿಯುತ್ತದೆ ಎಂದರೆ ನಂಬಲು ಸಾಧ್ಯವೇ? ನಂಬಲು ಅಸಾಧ್ಯ ಎನಿಸಿದರೂ ಇದುವೇ ಸತ್ಯ. ಈ ಒಂದು ಪ್ರಾಣಿ ಆಹಾರ ಮತ್ತು ನೀರಿಲ್ಲದೆಯೂ ಬರೋಬ್ಬರಿ 30 ವರ್ಷಗಳವರೆಗೆ ಬದುಕಬಲ್ಲದು. ಅಂತಹ ವಿಚಿತ್ರ ಪ್ರಾಣಿ ಕುರಿತಾದ ಸಂಪೂರ್ಣ ವಿವರಗಳನ್ನು ನಾವೀಗ ತಿಳಿದುಕೊಳ್ಳೋಣ.

ನೀರು ಕರಡಿ

ಟಾರ್ಡಿಗ್ರೇಡ್ ಅಂತಾನೂ ಕರೆಯಲ್ಪಡುವ ನೀರು ಕರಡಿ ಒಂದು ಜಲಚರ ಪ್ರಾಣಿ. ಇದು ಅರ್ಧ ಮಿಲಿಮೀಟರ್ ಗಾತ್ರದ ಜೀವಿಯಾಗಿದ್ದು, ಸಮುದ್ರದ ತಳದಲ್ಲಿ ಮತ್ತು ಹೆಪ್ಪುಗಟ್ಟಿದ ಸ್ಥಳಗಳಲ್ಲಿ ವಾಸಿಸುತ್ತದೆ. ನೀರುನಾಯಿಗಳು, ನೀರು ಕುದುರೆಗಳು ಮತ್ತು ನೀರು ಪಕ್ಷಿಗಳಂತಹ ಅಸಂಖ್ಯಾತ ಜಲಚರ ಪ್ರಾಣಿಗಳಿದ್ದರೂ, ಈ ಟಾರ್ಡಿಗ್ರೇಡ್ ಮಾತ್ರ ನಮ್ಮನ್ನು ಬೆರಗುಗೊಳಿಸುವಂತಹ ಅಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದೆ.

ಟಾರ್ಡಿಗ್ರೇಡ್, ನೆಲದ ಮೇಲೆ ವಾಸಿಸುವ ಕರಡಿಯಂತೆ ಕಾಣುತ್ತದೆ. ಆದ್ದರಿಂದ ಇದರ ನೋಟವು ತುಂಬಾ ವಿಭಿನ್ನವಾಗಿದೆ. ಈ ಜೀವಿಯನ್ನು ನೀವು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಸೂಕ್ಷ್ಮದರ್ಶಕದ ಸಹಾಯದಿಂದ ಮಾತ್ರ ಇದನ್ನು ನೋಡಲು ಸಾಧ್ಯ. ಈ ಟಾರ್ಡಿಗ್ರೇಡ್ 150 ಡಿಗ್ರಿ ಸೆಲ್ಸಿಯಸ್ ಅಥವಾ 302 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನ ಮತ್ತು ಮೈನಸ್ 457 ಡಿಗ್ರಿಗಳಷ್ಟು ಶೀತವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಮಾನವರು ಈ ಭೂಮಿಯ ಮೇಲೆ ನಾಶವಾದರೂ ಸಹ, ಈ ಜೀವಿ ಮಾತ್ರ ಅನೇಕ ವರ್ಷಗಳವರೆಗೆ ಬದುಕುಳಿಯುತ್ತದೆ. ಈ ಪ್ರಾಣಿ ಆಹಾರ ಮತ್ತು ನೀರಿಲ್ಲದೆ 30 ವರ್ಷಗಳವರೆಗೆ ಬದುಕಬಲ್ಲದು. ನೀರಿನ ಕರಡಿ ಕೇವಲ 0.5 ಮಿಲಿಮೀಟರ್ ಉದ್ದವಿರುತ್ತದೆ. ಕುದಿಯುವ ನೀರಿನಲ್ಲಿ ಕುದಿಸಿದಾಗಲಿ ಅಥವಾ ಮಂಜುಗಡ್ಡೆಯಲ್ಲಿ ಹೆಪ್ಪುಗಟ್ಟಿಸಿದಾಗಲಿ ಈ ಜೀವಿಯನ್ನು ನಾಶಮಾಡಲು ಸಾಧ್ಯವಿಲ್ಲ. ಇದು ಸುಮಾರು 200 ವರ್ಷಗಳ ಕಾಲ ಬದುಕಬಲ್ಲದು ಎಂದು ಹೇಳಲಾಗುತ್ತದೆ. (ಏಜೆನ್ಸೀಸ್​)