ನ್ಯೂಸ್

ಎರಡು ಗಂಟೆಗಳ ಕಾಲ ಚಿಲ್ಕ ಸರೋವರದಲ್ಲಿ ಸಿಲುಕಿದ ಕೇಂದ್ರ ಸಚಿವ ಪರಷೋತ್ತಮ್!

ಭುವನೇಶ್ವರ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಷೋತ್ತಮ್ ರೂಪಾಲ ಅವರಿದ್ದ ಬೋಟ್​ ಒಡಿಶಾದ ಚಿಲ್ಕ ಸರೋವರದಲ್ಲಿ ಭಾನುವಾರ ಸಂಜೆ ಎರಡು ಗಂಟೆಗಳ ಕಾಲ ಸಿಲುಕಿಕೊಂಡಿತ್ತು. ಮೀನುಗಾರರು ಹಾಕಿದ ಬಲೆಯಲ್ಲಿ ಸಿಕ್ಕಿಕೊಂಡಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.

ಕೇಂದ್ರ ಸಚಿವ ರೂಪಾಲ ಸೇರಿದಂತೆ ದೋಣಿಯಲ್ಲಿ ಸಿಲುಕಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮತ್ತು ಸ್ಥಳೀಯ ಬಿಜೆಪಿ ಮುಖಂಡರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಗಿದೆ. ಸಚಿವರು ಖುರ್ದಾ ಜಿಲ್ಲೆಯ ಬಾರ್ಕುಲ್‌ನಿಂದ ಪ್ರಯಾಣ ಆರಂಭಿಸಿ ಬ್ಲೂ ಲಗೂನ್ ಮೂಲಕ ಪುರಿ ಜಿಲ್ಲೆಯ ಸತ್ಪಾದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಸರೋವರದ ಮಧ್ಯದಲ್ಲಿ ನಲಬಾನ ಪಕ್ಷಿಧಾಮ ಬಳಿ ಯಾತ್ರಿಕೃತ ಬೋಟ್​ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿತ್ತು. ಕತ್ತಲಾಗಿ ಹಡಗು ಚಲಾಯಿಸುವ ನಾವಿಕನಿಗೆ ದಾರಿ ತಪ್ಪಿ ಬೇರೆ ಮಾರ್ಗದಲ್ಲಿ ಬಂದಿದ್ದರು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ಬೋಟ್​ ನಡೆಸುತ್ತಿದ್ದ ವ್ಯಕ್ತಿ ಹೊಸ ಮಾರ್ಗದಲ್ಲಿ ಹೋಗಿದ್ದರಿಂದ ದಾರಿ ತಪ್ಪಿತು. ಜತೆಗೆ ದಾರಿ ತಪ್ಪಿತ್ತು. ಸತಪದವನ್ನು ತಲುಪಲು ನಮಗೆ ಸುಮಾರು ಎರಡು ಗಂಟೆ ಸಮಯ ಬೇಕಾಯಿತು" ಎಂದು ಹೇಳಿದರು.

ಪುರಿ ಜಿಲ್ಲೆಯ ಕೃಷ್ಣಪ್ರಸಾದ್ ಪ್ರದೇಶದ ಬಳಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ರೂಪಾಲಾ ಭಾಗವಹಿಸಬೇಕಿತ್ತು. ಈ ಘಟನೆಯಿಂದ ಕಾರ್ಯಕ್ರಮ ರದ್ದುಗೊಳಿಸಲಾಯಿತು. ರಾತ್ರಿ 10.30ರ ಸುಮಾರಿಗೆ ರೂಪಾಲಾ ಪುರಿಗೆ ತಲುಪಿದ್ದಾರೆ ಎಂದು ಆಪ್ತ ಅಧಿಕಾರಿ ತಿಳಿಸಿದ್ದಾರೆ.

11ನೇ ಹಂತದ ಸಾಗರ ಪರಿಕ್ರಮ ಕಾರ್ಯಕ್ರಮದ ಭಾಗವಾಗಿ ಮೀನುಗಾರೊಂದಿಗೆ ಸಂವಾದ ನಡೆಸಲು ಕೇಂದ್ರ ಸಚಿವರು ಒಡಿಶಾಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಗಂಜಾಂ ಜಿಲ್ಲೆಯ ಗೋಪಾಲಪುರ ಬಂದರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಸೋಮವಾರ ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್​ ಅವರೊಂದಿಗೆ ರೂಪಾಲ ಪಾರಾದೀಪ್​ ಮೀನುಗಾರಿಕೆ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಚಿಲ್ಕ ಸರೋವರ ಏಪ್ಯಾದ ಅತಿದೊಡ್ಡ ಉಪ್ಪು ನೀರಿನಿಂದ ಕೂಡಿದೆ ಹಾಗೂ ಹಲವು ಭೌಗೋಳಿಕತಗೆ ಹೆಸರುವಾಸಿಯಾಗಿದೆ.