ಬಾಲಕಿಯರ ರಾಜ್ಯ ಫುಟ್‌ಬಾಲ್ ಟೂರ್ನಿ -ಶಿವಮೊಗ್ಗ ತಂಡದ ಗೆಲುವಿನ ಅಭಿಯಾನ

dvg-football-jan-7.jpg
Published on

ದಾವಣಗೆರೆ: ಶಿವಮೊಗ್ಗದ ನೋವಾ ಫುಟ್‌ಬಾಲ್ ಕ್ಲಬ್‌ನ ಬಾಲೆಯರು ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಅಡಿಯ ರಾಜ್ಯ ಮಟ್ಟದ ಬಾಲಕಿಯರ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ.

ನಗರದ ಲೂರ್ಡ್ಸ್ ಬಾಲಕರ ಶಾಲಾ ಮೈದಾನದಲ್ಲಿ ಭಾನುವಾರ, 15 ವರ್ಷದೊಳಗಿನವರ ವಿಭಾಗದ ಮೂರನೇ ಲೀಗ್ ಪಂದ್ಯದಲ್ಲಿ ಶಿವಮೊಗ್ಗ ತಂಡ, ಏಕಪಕ್ಷೀಯ ಆಟ ಪ್ರದರ್ಶನದೊಂದಿಗೆ (10-0) ಎದುರಾಳಿ ಹಳಿಯಾಳ್ ಫುಟ್‌ಬಾಲ್ ಕ್ಲಬ್ ಅನ್ನು ಮಣಿಸಿತು. ಮೊದಲಾರ್ಧದಲ್ಲಿ 6 ಅಂಕ, ದ್ವಿತೀಯಾರ್ಧದಲ್ಲಿ 4 ಅಂಕ ಪಡೆದು ಜಯ ದಾಖಲಿಸಿತು. ಹಳಿಯಾಳ್ ತಂಡ ಹಳಿ ತಪ್ಪಿತು. ಅಮೂಲ್ಯ 8, ವಿದ್ಯಾ 2 ಗೋಲ್‌ಗಳ ಕಾಣಿಕೆ ನೀಡಿದರು.

ಇದೇ ವಿಭಾಗದಲ್ಲಿ ಚಿಕ್ಕಮಗಳೂರು ಫುಟ್‌ಬಾಲ್ ಅಕಾಡೆಮಿ ತಂಡ, ಹಾವೇರಿಯ ಡಿ ಯುನೈಟೆಡ್ ತಂಡವನ್ನು 2-1 ಅಂಕದ ಅಂತರದಿಂದ ಪರಾಭವಗೊಳಿಸಿತು. ವಿಜೇತ ತಂಡದ ವಂಶಿಕಾ, ಎಂ.ಎನ್.ಸಹನಾ ತಲಾ ಒಂದು ಗೋಲ್ ಮಾಡಿದರು.

13 ವರ್ಷದೊಳಗಿನವರ ವಿಭಾಗದ ಪಂದ್ಯದಲ್ಲಿ ಆತಿಥೇಯ ದಾವಣಗೆರೆ ಕರುನಾಡು ಫುಟ್ಬಾಲ್ ಕ್ಲಬ್, ಎದುರಾಳಿ ಹಳಿಯಾಳ್ ಎಫ್‌ಸಿ ತಂಡವನ್ನು 6-0 ಅಂಕದಿಂದ ಸೋಲಿಸಿತು. ತ್ರಿಷಾ-3, ವೈಷ್ಣವಿ-2, ಪಿ. ಸ್ವರೂಪಾ 1 ಗೋಲ್‌ಗಳ ಕೊಡುಗೆ ನೀಡಿದರು.

ಇದೇ ವಿಭಾಗದಲ್ಲಿ ಚಿಕ್ಕಮಗಳೂರು ಫುಟ್‌ಬಾಲ್ ಅಕಾಡೆಮಿಯು ದಾವಣಗೆರೆಯ ಕರುನಾಡು ಎಫ್‌ಸಿ ತಂಡದ ವಿರುದ್ಧ (1-0) ಗೆಲುವು ಸಾಧಿಸಿತು. ಶಿವಮೊಗ್ಗದ ಲಿಬರ್ಟಿ ಎಫ್‌ಸಿ ತಂಡವು ಹಾವೇರಿಯ ಡಿ ಯುನೈಟೆಡ್ ತಂಡವನ್ನು 2-1 ಅಂಕದಿಂದ ಸೋಲಿಸಿತು. ಅಫ್ರೀನ್ 2 ಗೋಲ್ ಬಾರಿಸಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net