ನ್ಯೂಸ್

ರೈತರ ಸಮಸ್ಯೆ ಆಲಿಸುವಲ್ಲಿ ಸಿಎಂ ವಿಫಲ: ಕೇಂದ್ರ ಸರ್ಕಾರದತ್ತ ಬೆರಳು ತೋರಿ ಪಲಾಯನವಾದ: ಪ್ರಲ್ಹಾದ ಜೋಶಿ

ಬೆಂಗಳೂರು: ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಲೆ ನಿಗದಿಗಾಗಿ ತೀವ್ರ ಪ್ರತಿಭಟನೆ ಕೈಗೊಂಡಿರುವ ರೈತರ ಸಂಘ, ಸರ್ಕಾರದ ವಿರುದ್ಧ ಭಾರೀ ಅಸಮಾಧಾನ ಹೊರಹಾಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಿಎಂ ಸ್ಥಾನ ಉಳಿಸಿಕೊಳ್ಳುವ ಹತಾಶೆಯಲ್ಲಿರುವ ಸಿದ್ದರಾಮಯ್ಯ ಮನಸ್ಸೋ ಇಚ್ಛೆ ಮಾತಾಡುತ್ತಿದ್ದಾರೆ ಎಂದಿದ್ದಾರೆ.

"ಸಿದ್ದರಾಮಯ್ಯನವರು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿ, ಕೇಂದ್ರ ಸರ್ಕಾರದ ಮೇಲೆ ಬೆರಳು ತೋರಿ ಪಲಾಯನವಾದ ಮಾಡುತ್ತಿದ್ದಾರೆ. ಸಿಎಂ ಉಲ್ಲೇಖಿಸಿದ ಸಂಸತ್ತಿನ ಉತ್ತರದಲ್ಲಿ 30.06.25 ರವರೆಗಿನ ದತ್ತಾಂಶ ಮಾತ್ರವಿದೆ. ಆದರೆ, ಎಥೆನಾಲ್ ಸರಬರಾಜು ವರ್ಷವು ನವೆಂಬರ್‌ನಿಂದ ಪ್ರಾರಂಭವಾಗಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳುತ್ತದೆ. ಸಂಸತ್ತಿನಲ್ಲಿ ನೀಡಲಾದ ದತ್ತಾಂಶವು 30.06.2025 ರವರೆಗಿನದ್ದು ಮಾತ್ರ" ಎಂದರು.

"2024-25ರಲ್ಲಿ ಕರ್ನಾಟಕದಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಒಟ್ಟು 139.8 ಕೋಟಿ ಲೀಟರ್ ಎಥೆನಾಲ್ ಅನ್ನು ಪೂರೈಸಿವೆ. ಮುಖ್ಯಮಂತ್ರಿಗಳಾಗಿ ತಾವು ಮಾತನಾಡುವ ಮೊದಲು, ದತ್ತಾಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು, ತಮ್ಮ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು, ಆ ಬಳಿಕ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಇರುವುದು ನಿಜಕ್ಕೂ ರಾಜ್ಯದ ದುರಂತ" ಎಂದಿದ್ದಾರೆ.

"2004-2014ರ ಸಾಲಿನಲ್ಲಿ ಕಬ್ಬು ಬೆಳೆದ ರೈತರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಯಾಗುತ್ತಿರಲಿಲ್ಲಾ. ಈ ವಿಳಂಬ ಧೋರಣೆಯಿಂದ ರೈತರು ಸಂಕಷ್ಟದಲ್ಲಿದ್ದರು. ಅತಿ ಕಡಿಮೆ FRP/MSP, 2005ರಲ್ಲಿಯೇ ಎಥೆನಾಲ್ ಮಿಶ್ರಣದ ಪ್ರಸ್ತಾಪವನ್ನು ಮಾಡಿದ್ದರೂ ಎಥೆನಾಲ್ ಬಗ್ಗೆ ಕಿಂಚಿತ್ತೂ ಯೋಚನೆಯೂ ಮಾಡಿರಲಿಲ್ಲ. 2013-14ರಲ್ಲಿ ಕಬ್ಬು ಬೆಳೆ ಖರೀದಿ 57,104 ಕೋಟಿ ರೂ.ಗಳಷ್ಟಿತ್ತು. ಆದರೆ, 2024-25ರ ಮೌಲ್ಯ 1,02,687 ಕೋಟಿ ರೂ." ಎಂದು ಹೇಳಿದರು.

"ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಮೂಲಕ 2013-14 ರಲ್ಲಿ 210 ರೂ.ಗಳಷ್ಟಿತ್ತು, ಆದರೆ, 2025-26ರ ಸಕ್ಕರೆ ಹಂಗಾಮಿನಲ್ಲಿ ಶೇ.10.25ರಷ್ಟು ಚೇತರಿಕೆಯೊಂದಿಗೆ 355 ರೂ. ಕ್ವಿಂಟಲ್‌ಗೆ ಏರಿಕೆಯಾಗಿದೆ. ಇದು ನಮ್ಮ‌ ಸರ್ಕಾರದ ಬದ್ದತೆ ಸಿದ್ದರಾಮಯ್ಯನವರೇ. ಹೆಚ್ಚುವರಿ ಸಕ್ಕರೆಯನ್ನು ಸಮತೋಲನಗೊಳಿಸಲು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. 2013-14ರಿಂದ 2024-25 ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು OMC ಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ" ಎಂದರು.

"2013-14ರಿಂದ, ಕಬ್ಬು ಆಧಾರಿತ ಡಿಸ್ಟಿಲರಿಗಳು ಮತ್ತು ಧಾನ್ಯ ಆಧಾರಿತ ಡಿಸ್ಟಿಲರಿಗಳು 2.18 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸಿವೆ. ಇದರಲ್ಲಿ ಕಬ್ಬು ಆಧಾರಿತ ಡಿಸ್ಟಿಲರಿಗಳು (26.10.2025 ರಂತೆ) ಓಎಂಸಿಗಳಿಗೆ ಎಥೆನಾಲ್ ಮಾರಾಟದಿಂದ 1.29 ಲಕ್ಷ ಕೋಟಿ ರೂ. ಗಳಿಸಿವೆ. ಇದು ಕಬ್ಬಿನ ಗಿರಣಿಗಳಿಗೆ ರೈತರ ಕಬ್ಬಿನ ಬಾಕಿಯನ್ನು ಸಕಾಲಿಕವಾಗಿ ಪಾವತಿಸಲು ಸಹಾಯ ಮಾಡಿದೆ. ರಫ್ತುಗಳನ್ನು ಸಕಾಲಿಕವಾಗಿ ಅನುಮತಿಸಲಾಗಿದೆ. ಸಕ್ಕರೆ ಬೆಲೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ನಮ್ಮ ಸರ್ಕಾರದ ಬದ್ದತೆ. ಕಳೆದ 10 ವರ್ಷದ ಅವಧಿಯಲ್ಲಿ 10 LMTಗೆ ಅವಕಾಶ ನೀಡಲಾಗಿತ್ತು, ಈ ವರ್ಷ 15 LMTಗೆ ಅವಕಾಶ ನೀಡಲಾಗುತ್ತಿದೆ" ಎಂದಿದ್ದಾರೆ.

"ಇಡೀ ದೇಶಕ್ಕೆ ‌ಒಂದು ನೀತಿಯನ್ನು ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಕೆಲಸ. ನೀವು ರಾಜ್ಯದಲ್ಲಿ ಬೆಳೆಗಾರರ ಬೇಡಿಕೆಯ ಪ್ರಕಾರವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿ ಕೇವಲ ಸುಳ್ಳು ಹೇಳಿಕೊಂಡು, ಸುಳ್ಳಿನ ಮನೆಯನ್ನು ಕರ್ನಾಟಕದಲ್ಲಿ ನಿರ್ಮಿಸಿಕೊಂಡು ಜನರನ್ನು ರೈತರನ್ನು ಬೀದಿಗೆ ತಳ್ಳುವ ನೀಚ ಕೆಲಸ ಮಾಡಿದ್ದೀರಾ. ಅಂದು ವಿರೋಧ ಪಕ್ಷದಲ್ಲಿದ್ದಾಗ ಬೆಲೆ ನಿಗದಿ ಮಾಡಿ, ಆವರ್ತ ನಿಧಿ ಸ್ಥಾಪನೆ ಮಾಡಿ ಎಂದು ಸರ್ಕಾರಗಳಿಗೆ ಬಿಟ್ಟಿ ಸಲಹೆ ನೀಡಿದ ನೀವು, ಇದೀಗ ಅಧಿಕಾರದಲ್ಲಿರುವಾಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವುದೇ ನಿಮ್ಮ ಮೂಲಭೂತ ಕೆಲಸವಾಗಿದೆಯಾ ಸಿದ್ದರಾಮಯ್ಯನವರೇ?. ಗ್ಯಾರಂಟಿಗಳು ಮಾತ್ರವೇ ನಿಮ್ಮ ಸರ್ಕಾರದ ಆಡಳಿತವಾಗಿದೆ ಹೊರೆತು ರಾಜ್ಯದ ಅಭಿವೃದ್ಧಿಯಲ್ಲ. ನಿಮ್ಮ ದುರಾಡಳಿತದ ಪರಮಾವಧಿಯಿಂದಲೇ ಇಂದು ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ" ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.