ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಅಧ್ಯಕ್ಷರಿಗೆ ಕೇಂದ್ರ ಸಚಿವ ಜಿತೇಂದ್ರಸಿಂಗ್ ಮಂಗಳವಾರ (ಆಗಸ್ಟ್ 20) ಪತ್ರ ಬರೆದಿದ್ದಾರೆ. ಪತ್ರದಲ್ಲಿ ಲ್ಯಾಟರಲ್ ಎಂಟ್ರಿಗಾಗಿ ನಾಗರಿಕ ಸೇವಾ ಸಂಸ್ಥೆ ನೀಡಿರುವ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ತುರ್ತುಪರಿಸ್ಥಿತಿ ಬಳಿಕ ಭಾರತ ಈ ವಿಚಾರದಲ್ಲಿ ಗಮನ ಹರಿಸಿಲ್ಲ.. ಇದೇ ಮುಂದಿನ ದೊಡ್ಡ ಸಮಸ್ಯೆ; ನಾರಾಯಣ ಮೂರ್ತಿ
ಸಂವಿಧಾನದಲ್ಲಿ ನೀಡಿರುವ ಸಮಾನತೆಯ ಹಕ್ಕಿನ ಅಡಿಯಲ್ಲಿ ಲ್ಯಾಟರಲ್ ಎಂಟ್ರಿ ನೇಮಕಾತಿಯನ್ನು ಮಾಡಬೇಕು. ಸಾರ್ವಜನಿಕ ಉದ್ಯೋಗಗಳಲ್ಲಿ ಸಾಮಾಜಿಕ ನ್ಯಾಯದ ಕಡೆಗೆ ಸರ್ಕಾರದ ಬದ್ಧತೆ ಇರಬೇಕು. ಅದರಲ್ಲೂ ಇದರಿಂದ ಮೀಸಲಾತಿಗೆ ಯಾವುದೇ ಧಕ್ಕೆಯಾಗಬಾರದು ಎಂಬುದನ್ನು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಜಿತೇಂದ್ರ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಆಗಿರುವ ಅನ್ಯಾಯವನ್ನು ಹೋಗಲಾಡಿಸುವುದು, ಸಮಾಜದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದು ಈ ಮೀಸಲಾತಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಲೋಕಸೇವಾ ಆಯೋಗವು, ಕೇಂದ್ರ ಸರ್ಕಾರದ ವಿವಿಧ ಉನ್ನತ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಳೆ ಲ್ಯಾಟರಲ್ ಎಂಟ್ರಿ ಮೋಡ್ ಮೂಲಕ ಭರ್ತಿ ಮಾಡಲು ಜಾಹೀರಾತು ನೀಡಿತ್ತು. 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪಕಾರ್ಯದರ್ಶಿ ಒಟ್ಟು 45 ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಈ ನೇಮಕಾತಿಯ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತಿದವು. ಇದು ಮೀಸಲಾತಿಯನ್ನು ಕೊನೆಗೊಳಿಸುವ ಪ್ರಯತ್ನ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಮೋದಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.(ಏಜೆನ್ಸೀಸ್)