ಬೆಂಗಳೂರು: ರಾಜ್ಯದ ಆಡಳಿತಾತ್ಮಕ ಪ್ರಮುಖ ಕೇಂದ್ರವಾಗಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಡಿ.2 ರಿಂದ 11ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ನಿರಂತರವಾಗಿ ವಿದ್ಯುತ್ ಪೂರೈಸಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಿದ್ಧತೆ ಮಾಡಿಕೊಂಡಿದೆ.
10 ದಿನಗಳ ಅಧಿವೇಶನದ ಅವಧಿಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಹೆಸ್ಕಾಂ, ಸುವರ್ಣಸೌಧ ಸೇರಿ ಬೆಳಗಾವಿ ನಗರದ ಪ್ರಮುಖ ಪ್ರದೇಶಗಳ ವಿದ್ಯುತ್ ವಿತರಣಾ ವ್ಯವಸ್ಥೆ ಸುಸ್ಥಿತಿಯಲ್ಲಿಡಲು ವಿಶೇಷ ನಿರ್ವಹಣಾ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಅಧಿವೇಶನಕ್ಕೆ ಆಗಮಿಸುವ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆ ಸಜ್ಜುಗೊಳಿಸುವುದು ಹೆಸ್ಕಾಂನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಮಾರ್ಗಗಳ ಪರಿಶೀಲನೆ, ನಿರ್ವಹಣೆ ಹಾಗೂ ದುರಸ್ತಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ. ಸಂಭವನೀಯ ತಾಂತ್ರಿಕ ದೋಷಗಳು ಮತ್ತು ವಿದ್ಯುತ್ ವ್ಯತ್ಯಯಗಳನ್ನು ಮುಂಚಿತವಾಗಿಯೇ ತಡೆಗಟ್ಟಲು ಕ್ರಮ ಕೈಗೊಂಡಿದೆ. ಈ ಕಾರ್ಯಾಚರಣೆಯ ಭಾಗವಾಗಿ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ಈ ವಾರದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಗೊಂಡಿದೆ. ನ.14ರಂದು ಸುವರ್ಣ ಸೌಧದ ಫೀಡರ್ಗಳಿಗೆ ಸಂಬಂಧಿಸಿದಂತೆ ನಿರ್ವಹಣಾ ಕಾರ್ಯ ಮಾಡಿದೆ.
ಸುವರ್ಣಸೌಧದಕ್ಕೆ ಸಂಬಂಧಿಸಿದಂತೆ ವಿದ್ಯುತ್ ಬಳಕೆ ಬಿಲ್ಗಳಿಗೆ ನಿಯಮಿತವಾಗಿ ಹಣ ಸಂದಾಯವಾಗುತ್ತಿದೆ. ಹಾಗಾಗಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಿಲ್ಲ ಎಂದು ಹೆಸ್ಕಾಂ ಸ್ಪಷ್ಟಪಡಿಸಿದೆ. ಸುವರ್ಣಸೌಧಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಮುಖ ವಿದ್ಯುತ್ ಮಾರ್ಗಗಳಾದ ಬಸವೇಶ್ವರ ಸರ್ಕಲ್, ಹರಿಕಾಕಾ ಕಾಂಪೌಂಡ್, ಯಡಿಯೂರಪ್ಪ ರಸ್ತೆ ಫೀಡರ್ಗಳ ಸಮಗ್ರ ಪರಿಶೀಲನೆ, ನಿರ್ವಹಣೆ ಮತ್ತು ಅಗತ್ಯ ದುರಸ್ತಿ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆ. ಈ ಮೂಲಕ ವಿದ್ಯುತ್ ವಿತರಣಾ ಜಾಲದ ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ ಅಧಿವೇಶನದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಗೆ ತಾಂತ್ರಿಕ ಸಿದ್ಧತೆ ಮಾಡಿಕೊಂಡಿದೆ.
ಚಳಿಗಾಲದ ಅಧಿವೇಶನಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ವಿದ್ಯುತ್ ವ್ಯತ್ಯಯಕ್ಕೆ ಅವಕಾಶವಾಗದಂತೆ ಮುಂಚಿತವಾಗಿ ಅಗತ್ಯ ನಿರ್ವಹಣೆ, ತಾಂತ್ರಿಕ ಪರಿಶೀಲನೆ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಸುವರ್ಣಸೌಧ ಸಂಬಂಧಿಸಿದಂತೆ ವಿದ್ಯುತ್ ಬಳಕೆ ಬಿಲ್ಗಳು ಕಾಲಕಾಲಕ್ಕೆ ಹಣ ಪಾವತಿಯಾಗುತ್ತಿದೆ.
ಎನ್.ಹೇಮಂತ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ.