ಮಾಸ್ಕೋ: ರಷ್ಯಾದ ಮೇಲೆ ಯುಕ್ರೇನ್ ಪ್ರಬಲ ಡ್ರೋನ್ ದಾಳಿ(Drone Attack) ನಡೆಸಿದೆ. ಈ ದಾಳಿಯಲ್ಲಿ ರಷ್ಯಾದ ಕಪ್ಪು ಸಮುದ್ರದ ಬಳಿ ಇರುವ ಟುವಾಪ್ಸೆ ಬಂದರಿಗೆ ತೀವ್ರ ಹಾನಿಯಾಗಿದ್ದು, ತೈಲ ಟರ್ಮಿನಲ್ ಮೇಲೆ ಪರಿಣಾಮ ಬೀರಿದೆ ಎಂದು ಭಾನುವಾರ (ನ.02) ವರದಿಯಾಗಿದೆ. ಅಲ್ಲದೆ, ದಾಳಿಯ ಸಮಯದಲ್ಲಿ ಆಕಾಶದಲ್ಲಿ 164 ಯುಕ್ರೇನಿಯನ್ ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ರಷ್ಯಾದ ವಾಯು ರಕ್ಷಣಾ ಘಟಕ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾದ ಸುದ್ದಿ ಸಂಸ್ಥೆಯೊಂದು, ರಾತ್ರಿ ಯುಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ರಷ್ಯಾದ ವಾಯು ರಕ್ಷಣಾ ಘಟಕವು 164 ಯುಕ್ರೇನಿಯನ್ ಡ್ರೋನ್‌ಗಳನ್ನು ನಾಶಪಡಿಸಿದೆ ಎಂದು ವರದಿ ಮಾಡಿದೆ. ಅಲ್ಲದೆ, ಕಪ್ಪು ಸಮುದ್ರದ ಟುವಾಪ್ಸೆಯಲ್ಲಿ ಯುಕ್ರೇನಿಯನ್ ಡ್ರೋನ್ ದಾಳಿಯು ಭಾರಿ ಹಾನಿ ಉಂಟುಮಾಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಟುವಾಪ್ಸೆಯಲ್ಲಿ ಮಾನವರಹಿತ ವೈಮಾನಿಕ ವಾಹನ(ಯುಎವಿ) ಮೇಲಿನ ದಾಳಿಗೆ ಪ್ರತಿದಾಳಿ ನಡೆಸಲಾಗುತ್ತಿದೆ. ಈ ದಾಳಿಯು ಮಿಲಿಟರಿ ಲಾಜಿಸ್ಟಿಕ್ಸ್ ಅನ್ನು ಅಡ್ಡಿಪಡಿಸುವ ಯುಕ್ರೇನ್‌ನ ತೀವ್ರ ಕಾರ್ಯಾಚರಣೆಯ ಭಾಗವಾಗಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಯಾವ ಬಂದರು ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಕ್ರಾಸ್ನೋಡರ್ ಆಡಳಿತವು ಟೆಲಿಗ್ರಾಮ್ನಲ್ಲಿ ತಿಳಿಸಿದೆ.
ರಷ್ಯಾದ ಕ್ರಾಸ್ನೋಡರ್ ಪ್ರಾಂತ್ಯದ ಆಡಳಿತವು ಡ್ರೋನ್ ಅವಶೇಷಗಳು ಬಿದ್ದಿದ್ದು, ಬಂದರಿನ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಮತ್ತು ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ. ಅಲ್ಲದೆ, ಈ ಬಂದರು ಟುವಾಪ್ಸೆ ತೈಲ ಟರ್ಮಿನಲ್ ಮತ್ತು ರೋಸ್ನೆಫ್ಟ್ ನಿಯಂತ್ರಿಸುವ ಟುವಾಪ್ಸೆ ತೈಲ ಸಂಸ್ಕರಣಾಗಾರಕ್ಕೆ ನೆಲೆಯಾಗಿದೆ. ಈ ವರ್ಷ ಎರಡೂ ಸ್ಥಳಗಳನ್ನು ಯುಕ್ರೇನಿಯನ್ ಡ್ರೋನ್‌ಗಳು ಹಲವಾರು ಬಾರಿ ಗುರಿಯಾಗಿಸಿಕೊಂಡಿವೆ. ಅದರೆ, ಯಾವ ಬಂದರು ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ರಷ್ಯಾದ ವಿದ್ಯುತ್ ಗ್ರಿಡ್ ಮೇಲಿನ ದಾಳಿಗೆ ಪ್ರತೀಕಾರವಾಗಿ, ಯುಕ್ರೇನ್ ರಷ್ಯಾದ ಸಂಸ್ಕರಣಾಗಾರಗಳು, ಡಿಪೋಗಳು ಮತ್ತು ಪೈಪ್‌ಲೈನ್‌ಗಳ ಮೇಲಿನ ದಾಳಿಯನ್ನು ಹೆಚ್ಚಿಸಿದೆ. ಅಲ್ಲದೆ, ಈ ದಾಳಿಗಳು ಇಂಧನ ಪೂರೈಕೆಯ ಮೇಲೆ ಒತ್ತಡ ಹೇರುವುದು, ಮಿಲಿಟರಿ ಲಾಜಿಸ್ಟಿಕ್ಸ್ ಅನ್ನು ಅಡ್ಡಿಪಡಿಸುವುದು ಮತ್ತು ರಷ್ಯಾದ ಯುದ್ಧ ವೆಚ್ಚವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
ಟುವಾಪ್ಸೆಯ ಹೊರಗಿನ ಸೊಸ್ನೋವಿ ಗ್ರಾಮದಲ್ಲಿ ಡ್ರೋನ್ ಅವಶೇಷಗಳು ಅಪಾರ್ಟ್ಮೆಂಟ್ ಕಟ್ಟಡಕ್ಕೆ ಹಾನಿ ಮಾಡಿವೆ ಎಂದು ಕ್ರಾಸ್ನೋಡರ್ ಪ್ರದೇಶದ ಸರ್ಕಾರ ವರದಿ ಮಾಡಿದೆ. (ಏಜೆನ್ಸೀಸ್)