ನ್ಯೂಸ್

ನಿದ್ರಾಹೀನತೆ, ರಕ್ತದೊತ್ತಡ ಉಪಶಮನಕ್ಕೆ ಉಜ್ಜಾಯೀ ಪ್ರಾಣಾಯಾಮ

‘ಶ್ವಾಸ ಪ್ರಶ್ವಾಸಯೋರ್ಗತಿ ವಿಚ್ಛೇದಃ ಪ್ರಶಾಯಾಮ’ ಎಂದು ಪ್ರಾಣಾಯಾಮವನ್ನು ಮಹರ್ಷಿ ಪತಂಜಲಿ ಸೂತ್ರೀಕರಿಸಿದ್ದಾರೆ. ಎಂದರೆ ಉಚ್ಛಾ್ವಸ-ನಿಶ್ವಾಸಗಳ ಗತಿಯನ್ನು ವಿಚ್ಛೇದಿಸುವುದೇ ಪ್ರಾಣಾಯಾಮ. ಪ್ರಾಣವನ್ನು ವಿಸ್ತರಿಸುವುದು ಆ ಮೂಲಕ ವಶಪಡಿಸಿಕೊಳ್ಳುವುದು. ಯೋಗದ ಅರ್ಥದಲ್ಲಿ ಪ್ರಾಣ ಎಂದರೆ ಸಮಸ್ತ ಸೃಷ್ಟಿಯ ಮೂಲ ಚೈತನ್ಯ ಶಕ್ತಿ. ಅದು ನಮ್ಮೆಲ್ಲ ಚಟುವಟಿಕೆಗಳ ಚಾಲಕ ಹಾಗೂ ನಿಯಂತ್ರಕವಾಗಿದೆ. ಈ ಪ್ರಾಣಶಕ್ತಿ ನಮ್ಮ ದೇಹದಲ್ಲಿ ಹರಿಯುವ ಮಾರ್ಗಗಳಿಗೆ ‘ನಾಡಿ’ ಎನ್ನುತ್ತಾರೆ. ಪ್ರಾಣಮಯ ಕೋಶದಲ್ಲಿ ಸೂಕ್ಷಾ್ಮತಿ ಸೂಕ್ಷ್ಮವಾದ ಎಪ್ಪತ್ತೆರಡು ಸಹಸ್ರ ನಾಡಿಗಳಿವೆ. ಇವುಗಳಲ್ಲಿ ಮುಖ್ಯವಾಗಿ ಮೂರು ನಾಡಿಗಳು ಹೆಚ್ಚು ಪರಿಣಾಮಕಾರಿ ಕಾರ್ಯನಿರ್ವಹಿಸುವಂಥವು. ಇಡಾ, ಪಿಂಗಳ ಹಾಗೂ ಸುಷುಮ್ನ ನಾಡಿಗಳೆಂದು ಇವುಗಳನ್ನು ಕರೆಯುತ್ತಾರೆ.

‘ಹಠಯೋಗ ಪ್ರದೀಪಿಕ’ ಎಂಬ ಯೋಗ ಗ್ರಂಥಕರ್ತ ಸ್ವಾತ್ಮಾರಾಮಸೂರಿ ಎಂಟು ವಿಧದ ಸಾಂಪ್ರದಾಯಿಕ ಪ್ರಾಣಾಯಾಮವನ್ನು ವಿವರಿಸಿದ್ದಾರೆ. ಅವು ಸೂರ್ಯಭೇದನ, ಉಜ್ಜಾಯೀ, ಶೀತಲೀ, ಸೀತ್ಕಾರೀ, ಭಸ್ತ್ರಿಕಾ, ಭ್ರಾಮರೀ, ಮೂರ್ಛಾ ಮತ್ತು ಪ್ಲಾವನೀ ಎಂದು. ಇವುಗಳಲ್ಲಿ ಉಜ್ಜಾಯಿ ಪ್ರಾಣಾಯಾಮವು ಒಂದು ಶಮನಕಾರಕ ಪ್ರಾಣಾಯಾಮವೆಂದು ವರ್ಗೀಕರಿಸಲಾಗಿದೆ ಮತ್ತು ಅದು ದೇಹದ ಶಾಖವನ್ನು ಏರಿಸುವ ಪರಿಣಾಮವನ್ನು ಹೊಂದಿದೆ. ಯೋಗ ಚಿಕಿತ್ಸೆಯಲ್ಲಿ ಇದನ್ನು ನರಮಂಡಲವನ್ನು ಸ್ವಸ್ಥಗೊಳಿಸಲು ಹಾಗೂ ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.

ಮನೋಹಂತದಲ್ಲಿ ಇದು ಅಗಾಧವಾದ ವಿಶ್ರಾಂತಿಯ ಪರಿಣಾಮವನ್ನು ಉಂಟುಮಾಡುತ್ತದೆ. ನಿದ್ರಾಹೀನತೆಯನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದ್ದು, ಮಲಗುವ ಮೊದಲು ಶವಾಸನದಲ್ಲಿ ಇದನ್ನು ಮಾಡಬಹುದು. ಇದೊಂದೆ ಪ್ರಾಣಾಯಾಮ ಕುಳಿತು, ನಿಂತು, ಮಲಗಿ, ನಡೆಯುವಾಗಲೂ ಮಾಡಬಹುದಾದ ಪ್ರಾಣಾಯಾಮ ಕ್ರಿಯೆಯಾಗಿದೆ. ಇತರ ಬಂಧಗಳನ್ನು ಮುದ್ರೆಗಳನ್ನು ಜೊತೆಗೂಡಿಸದೆ ಅಥವಾ ಉಸಿರಿನ ಧಾರಣ ಮಾಡದೆ ಮೂಲರೂಪದಲ್ಲಿ ಇದರ ಅಭ್ಯಾಸ ಮಾಡುವುದರಿಂದ ಹೃದಯ ಬಡಿತದ ಗತಿಯನ್ನು ನಿಧಾನಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡ ಇರುವವರಿಗೆ ಇದು ಉಪಯುಕ್ತವಾಗಿದೆ. ಉಜ್ಜಾಯಿಯು ರಸಧಾರಣವನ್ನು ಶಮನಗೊಳಿಸುತ್ತದೆ. ಶರೀರವು ರಕ್ತ, ಅಸ್ಥಿ, ಮಜ್ಜೆ, ಮೇದಸ್ಸು, ಮಾಂಸ, ವೀರ್ಯ ಮತ್ತು ಚರ್ಮ ಎಂಬ ಸಪ್ತ ಧಾತುಗಳಿಂದ ಕೂಡಿದ್ದು ಅಜ್ಜಾಯಿಯು ಈ ದಾತುಗಳ ಅವ್ಯವಸ್ಥೆಯನ್ನು ಸರಿಪಡಿಸುತ್ತದೆ.

‘ಉಜ್ಜಾಯೀ’ ಎಂಬ ಸಂಸ್ಕೃತ ಪದದ ಅರ್ಥ ವಿಜಯೀ ಅಥವಾ ಜಯಶಾಲಿ. ಇದು ‘ಜೀ’ ಎಂಬ ಮೂಲ ಪದದಿಂದ ಬಂದಿದ್ದು ‘ಗೆಲ್ಲು’ ಅಥವಾ ‘ಗೆದ್ದು ಪಡೆದುಕೋ’ ಎಂಬ ಅರ್ಥ ಹೊಂದಿದೆ. ‘ಉಡ್’ ಎಂಬ ಪೂರ್ವಪದದ ಅರ್ಥ ‘ಬಂಧನ’. ಆದ್ದರಿಂದ ಉಜ್ಜಾಯೀ ಎಂದರೆ ಬಂಧನದಿಂದ ಮುಕ್ತಿಕೊಡುವ ಪ್ರಾಣಾಯಾಮ. ಇದು ಮನಸ್ಸಿನ ಸೂಕ್ಷ್ಮ ನೆಲೆಗಳ ಕಡೆಗೆ ಒಯ್ಯುವುದರಿಂದ ಇದನ್ನು ಅತೀಂದ್ರಿಯ ಉಸಿರಾಟ ಎಂದು ಕರೆಯುತ್ತಾರೆ. ಮತ್ತು ಇದನ್ನು ಮಂತ್ರಜಪ, ಅಜಪಾಜಪ, ಕ್ರಿಯಾಯೋಗ ಹಾಗೂ ಪ್ರಾಣ ವಿದ್ಯೆಯಂತಹ ತಾಂತ್ರಿಕ ಧ್ಯಾನದ ಅಭ್ಯಾಸಗಳಲ್ಲಿ ಖೇಚರೀ ಮುದ್ರೆಯೊಂದಿಗೆ ಬಳಸಲಾಗುತ್ತದೆ. ಉಜ್ಜಾಯೀ ಪ್ರಾಣಾಯಾಮ: ನಿಮಗೆ ಹಿತವೆನಿಸುವ ಭಂಗಿಯಲ್ಲಿ ಕುಳಿತುಕೊಳ್ಳಿ. ಧ್ಯಾನ ಆಸನ ಒಳ್ಳೆಯದು. ಕಣ್ಣುಗಳನ್ನು ಮುಚ್ಚಿ ಇಡೀ ದೇಹವನ್ನು ಸಡಿಲಬಿಡಿ. ಮೂಗಿನ ಹೊಳ್ಳೆಗಳಲ್ಲಿ ಉಸಿರಿನ ಬಗ್ಗೆ ಗಮನವಿರಿಸಿ.

ಶಾಂತವಾಗಿ ಲಯಬದ್ಧವಾಗಿ ಉಸಿರಾಟ ನಡೆಯಲಿ. ಸ್ವಲ್ಪ ಸಮಯದ ನಂತರ ಗಮನವನ್ನು ಗಂಟಲಿನ ಕಡೆ ಹರಿಸಿ. ಉಸಿರು ಗಂಟಲಿನ ಮೂಲಕ ಒಳಗೆ ಹೊರಗೆ ಆಡುತ್ತಿದೆಯೇ ಹೊರತು ಮೂಗಿನ ಹೊಳ್ಳೆಗಳ ಮೂಲಕ ಅಲ್ಲ ಎಂದು ಭಾವಿಸಲು ಅಥವಾ ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಉಚ್ಛಾ್ವಸ ಮತ್ತು ನಿಶ್ವಾಸಗಳು ಗಂಟಲಿನ ಒಂದು ಚಿಕ್ಕ ರಂದ್ರದ ಮೂಲಕ ನಡೆಯುತ್ತಿದೆಯೇನೋ ಎಂದೆನಿಸಲಿ. ಉಸಿರಾಟವು ನಿಧಾನವಾಗಿ, ದೀರ್ಘವಾಗಿ ನಡೆಯಲು ಆರಂಭಿಸಿದಂತೆ ಮಲಗಿರುವ ಮಗುವಿನ ಉಸಿರಾಟದ ಹಾಗೆ ಗಂಟಲಿನಿಂದ ಗಾಳಿಯ ಸ್ಪರ್ಶದ ‘ಹಿಸ್’ ನಂತಹ ಸದ್ದು ಹೊರಡುವಂತಹ ಶ್ವಾಸನಾಳದ್ವಾರವನ್ನು ನವಿರಾಗಿ ಸಂಕುಚಿಸಿ. ಇದನ್ನು ಸರಿಯಾಗಿ ಮಾಡಿದರೆ ಉದರವೂ ಅದೇ ಸಮಯದಲ್ಲಿ ಸಂಕುಚಿತಗೊಳ್ಳುತ್ತದೆ. ಇದು ಯಾವುದೇ ಪ್ರಯತ್ನವಿಲ್ಲದೆ ತಾನಾಗಿಯೇ ಆಗುತ್ತದೆ. ಉಚ್ಛಾ್ವಸ, ನಿಶ್ವಾಸಗಳೆರಡೂ ದೀರ್ಘ, ಆಳ ಹಾಗೂ ನಿಯಂತ್ರಿತವಾಗಿರಲಿ. ಗಂಟಲಿನಲ್ಲಿ ಉಸಿರಾಟದಿಂದ ಪ್ರಯತ್ನಪೂರ್ವಕ ಹೊರಡುವ ಸದ್ದಿನ ಬಗ್ಗೆ ಗಮನ ಕೇಂದ್ರೀಕರಿಸುತ್ತ ಯೋಗದ ಉಸಿರಾಟವನ್ನು ಅಭ್ಯಾಸಮಾಡಿ.