ಉಡುಪಿ: ರಾಜ್ಯಾದ್ಯಂತ ವಿವಾದದ ಕಿಡಿ ಹೊತ್ತಿಸಿದ್ದ ಉಡುಪಿಯ ಟಾಯ್ಲೆಟ್ ಪ್ರಕರಣದ ವಿಚಾರವಾಗಿ ಇದೀಗ ಮತ್ತೊಂದು ಆಘಾತಕಾರಿ ವಿಚಾರ ಹೊರಬಿದ್ದಿದ್ದು, ಬಜರಂಗದಳದ ಮುಖಂಡರೊಬ್ಬರು, ಆರೋಪಿ ವಿದ್ಯಾರ್ಥಿನಿಯ ತಂದೆ ಹಿಂದೆ ಪಿಎಫ್ಐ ಕಾರ್ಯಕರ್ತರಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಹೇಳಿಕೆ ನೀಡಿದ್ದು, "ಆರೋಪಿ ವಿದ್ಯಾರ್ಥಿನಿ ಶಫಾಳ ತಂದೆ ಪಿಎಫ್ಐ ಕಾರ್ಯಕರ್ತ. ಈ ಪ್ರಕರಣದ ಹಿಂದೆ ವ್ಯವಸ್ಥಿತ ಷಡ್ಯಂತ್ರ ಕಾಣಿಸುತ್ತಿದೆ. ವೀಡಿಯೋ ಮಾಡಿ ಮುಸಲ್ಮಾನರಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲಾಗುತ್ತದೆ. ಬ್ಲ್ಯಾಕ್ಮೇಲ್ ಜಿಹಾದ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಪಿಎಫ್ಐ ಪ್ರಾಯೋಜಿತ ಷಡ್ಯಂತ್ರ ಇದೆ" ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾಲೇಜ್ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣ: ಆರು ಪಿಎಫ್ಐ ಕಾರ್ಯಕರ್ತರು ದೋಷಿ, ಐವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ
ಈ ಹೇಳಿಕೆ ಇನ್ನೊಂದು ವಿವಾದಕ್ಕೆ ಕಾರಣವಾಗಲಿದ್ದು ಪ್ರಕರಣದ ತನಿಖೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೊಂದಿದೆ. ಈ ಆಯಾಮದಲ್ಲೂ ತನಿಖೆ ಶುರುವಾಗಿ, ಷಡ್ಯಂತ್ರ ಇದೆ ಎನ್ನುವುದು ಸಾಬೀತಾದರೆ, ಆರೋಪಿತ ವಿದ್ಯಾರ್ಥಿನಿಯರ ಪರವಾಗಿ ಮಾತನಾಡಿದ್ದವರಿಗೆ ಹಿನ್ನಡೆ ಉಂಟಾಗಲಿದೆ.
ಪತ್ರಿಕಾಗೋಷ್ಟಿ ನಡೆಸಿ ವಿಶ್ವ ಹಿಂದೂ ಪರಿಷತ್ -ಬಜರಂಗದಳ, ಪ್ರತಿಭಟನಾ ನಿರತ ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿದೆ. ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕೆ.ಆರ್. "ಪ್ರತಿಭಟನೆಯಲ್ಲಿ ಭಾಗಿಯಾದ ಇಬ್ಬರು ಹಿಂದು ಮುಖಂಡರ ಶರಣ್ ಪಂಪ್ ವೆಲ್, ದಿನೇಶ್ ಮೆಂಡನ್ ಮೇಲೆ ಕೇಸ್ ದಾಖಲಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದೇವೆ. ಘಟನೆ ಹಿಂದೆ ವ್ಯವಸ್ಥಿತ ಸಂಚು ಇದೆ ಎಂಬ ಶಂಕೆ ಇದೆ.
ತಾಯಂದಿರಲ್ಲಿ ಜಾಗೃತಿ ಮಾಡುವ ಉದ್ದೇಶವನ್ನು ವಿಹಿಂಪ ಹಾಗೂ ಭಜರಂಗದಳ ಹೊಂದಿದೆ. ಇದೀಗ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು ಬಹಳ ಆಸಕ್ತಿ ತೋರಿ ಪೊಲೀಸ್ ಇಲಾಖೆ ಕೆಲವೇ ಗಂಟೆಯಲ್ಲಿ ಕೇಸ್ ಮಾಡಿದೆ.
ಇದನ್ನೂ ಓದಿ: ಪಿಎಫ್ಐ ನಿಷೇಧಕ್ಕೆ ಪ್ರತೀಕಾರ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ!: ಹಿಮಂತ ಬಿಸ್ವಾ ಶರ್ಮಾ
ಖಾಸಗಿ ವೀಡಿಯೋ ತೆಗೆಯುವುದು ಸಮಾಜದ ಮೇಲಿನ ಅಶಾಂತಿ ಸೃಷ್ಟಿ ಮಾಡೋದಿಲ್ವಾ? ಪ್ರಕರಣದ ಎಫ್ಐಆರ್ ದಾಖಲಾಗಲು ಎಂಟು ದಿನ ಬೇಕಾಯ್ತಾ? ಪೊಲೀಸರು ಆಸಕ್ತಿಯನ್ನು ಪ್ರಕರಣದ ತನಿಖೆಯಲ್ಲಿ ತೋರಿಸಿ. ಜಿಹಾದಿಗಳ ವಿರುದ್ಧ ಸಮಾಜ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕೇಸ್ ಹಿಂಪಡೆಯಬೇಕು, ಇಲ್ಲದಿದ್ದರೆ ಇಡೀ ಹಿಂದೂ ಸಮಾಜ ಒಗ್ಗೂಡಿಸುತ್ತೇವೆ. ಎರಡು ದಿನದಲ್ಲಿ ಕೇಸ್ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ.