ನ್ಯೂಸ್

ರಾಮಮಂದಿರ ನಿರ್ಮಾಣಕ್ಕಿದ್ದ ಅಡೆತಡೆಗಳನ್ನು ನಿವಾರಿಸಿದ್ದು ಶಿವಸೇನೆ: ಸಂಜಯ್​ ರಾವತ್​

lakshmihegde

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಅಯೋಧ್ಯೆಗೆ ಭೇಟಿ ಕೊಡಲು ಆಮಂತ್ರಣದ ಅಗತ್ಯವೇ ಇಲ್ಲ ಎಂದು ಶಿವಸೇನಾ ಸಂಸದ ಸಂಜಯ್​ ರಾವತ್​ ಹೇಳಿದ್ದಾರೆ.

ಠಾಕ್ರೆಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಯೋಧ್ಯೆಗೆ ತೆರಳಿದ್ದರು. ರಾಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆಗಳನ್ನು ಶಿವಸೇನೆಯೇ ತೊಡೆದು ಹಾಕಿದೆ. ಹಾಗಾಗಿ, ಅಲ್ಲಿಗೆ ಹೋಗಬೇಕೆಂದರೆ ಆಹ್ವಾನ, ಆಮಂತ್ರಣಗಳು ಬೇಕಿಲ್ಲ ಎಂದು ರಾವತ್​ ತಿಳಿಸಿದ್ದಾರೆ.

ಠಾಕ್ರೆಯವರು ಅಯೋಧ್ಯೆಗೆ ಯಾವಾಗಲೂ ಹೋಗುತ್ತಿರುತ್ತಾರೆ. ಅದು ರಾಜಕೀಯಕ್ಕೆ ಸಂಬಂಧಪಟ್ಟ ಭೇಟಿಯಾಗಲಿ, ವಿಷಯವಾಗಲಿ ಅಲ್ಲ. ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲೂ ಕೂಡ ಅವರು ಅಲ್ಲಿಗೆ ಹೋಗುತ್ತಿದ್ದರು. ಶಿವ ಸೈನಿಕರಿಗೆ ಅಯೋಧ್ಯೆಯೊಂದಿಗೆ ವಿಶೇಷ ನಂಟು ಇದೆ. ಹಿಂದುತ್ವಕ್ಕಾಗಿ ತ್ಯಾಗವನ್ನೂ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಶಿವಸೇನೆ ಮುಖ್ಯಮಂತ್ರಿಗೂ ಆಹ್ವಾನ ನೀಡಬಹುದಾ ಎಂಬ ಕುತೂಹಲ, ಚರ್ಚೆ ಹುಟ್ಟಿದ ಬೆನ್ನಲ್ಲೇ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಂಜಯ್​ ರಾವತ್​ ಹೀಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು; ಮೂರೇ ದಿನದಲ್ಲಿ ಲಕ್ಷ ದಾಟಿತು

ಇನ್ನು ಕೇಂದ್ರ ಮಾಜಿ ಸಚಿವ ಅರವಿಂದ್​ ಸಾವಂತ್​ ಕೂಡ ಇದನ್ನೇ ಹೇಳಿದ್ದಾರೆ. ಅವರು ನಮಗೆ ಆಮಂತ್ರಣ ಕೊಡಲಿ ಬಿಡಲಿ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ರಾಮನೊಂದಿಗೆ ನಮಗೆ ನೇರವಾಗಿ ಸಂಬಂಧ ಇದೆ. ರಾಮ ಮಂದಿರಕ್ಕಾಗಿ ನಾವೂ ಹೋರಾಟ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)