ನ್ಯೂಸ್

ಕಾಡಿನಲ್ಲಿ ಮಹಿಳೆಯರ ಮೃತದೇಹ ಪತ್ತೆ! ಇಬ್ಬರ ಕೊಲೆಗೂ ಒಬ್ಬನೇ ಕಾರಣ; ಆರೋಪಿ ಬಂಧನ | Murder Case

ಮೋಹನ್​ ಶೆಟ್ಟಿ

Murder Case: ಗುರುವಾರ (ಸೆ.04) ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಅರಣ್ಯ ಪ್ರದೇಶದಲ್ಲಿ ಶವವಾಗಿ ಸಿಕ್ಕ ಘಟನೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಗವಾನ್​ನಲ್ಲಿ ವರದಿಯಾಗಿದೆ.

ಮೃತ ಮಹಿಳೆಯರನ್ನು ನೀಮಧಿ ಗ್ರಾಮದ ನಿವಾಸಿಗಳಾದ ಸೋನಿ ದೇವಿ (23) ಮತ್ತು ರಿಂಕು ದೇವಿ (31) ಎಂದು ಗುರುತಿಸಲಾಗಿದೆ. ಇವರಿಬ್ಬರ ಕೊಲೆಗೂ ಒಬ್ಬನೇ ಕಾರಣ ಎಂಬುದನ್ನು ಪತ್ತೆಹಚ್ಚಿದ ಖಾಕಿ ಪಡೆ, ಆರೋಪಿ ಶ್ರೀಕಾಂತ್ ಚೌಧರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಮಹಿಳೆಯರ ಕತ್ತು ಹಿಸುಕಿ ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕೊಲೆಗೆ ಕಾರಣವೇನು?

ಪೊಲೀಸರ ಪ್ರಕಾರ, ಮೃತ ಸೋನಿ ದೇವಿ ವಿವಾಹಿತೆ. ಈಕೆಗೆ ಆರೋಪಿಯೊಂದಿಗೆ ಅನೈತಿಕ ಸಂಬಂಧವಿತ್ತು. ಎರಡು ವರ್ಷಗಳ ಹಿಂದೆ ಈ ವಿಚಾರ ಗ್ರಾಮದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪಂಚಾಯತಿ ಇವರಿಬ್ಬರ ಸಂಬಂಧವನ್ನು ಅಕ್ರಮ ಮತ್ತು ಅಕ್ಷಮ್ಯ ಎಂದು ಹೇಳಿ, ಶ್ರೀಕಾಂತ್​ಗೆ 1.7 ಲಕ್ಷ ರೂ. ದಂಡ ವಿಧಿಸಿತ್ತು. ಇಷ್ಟೆಲ್ಲ ಆದರೂ ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿರಲಿಲ್ಲ. ಬದಲಿಗೆ ಮುಂದುವರೆದಿತ್ತು.

ಇಬ್ಬರು ಬಲಿ!

ಈ ಮಧ್ಯೆ ಶ್ರೀಕಾಂತ್, ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರೆ ನಿನ್ನನ್ನು ಕೊಲೆ ಮಾಡುವೆ ಎಂದು ಮಗಳಿಗೆ ಬೆದರಿಕೆ ಹಾಕಿದ್ದನು ಎಂದು ಸೋನಿಯ ಕುಟುಂಬ ಆರೋಪಿಸಿದೆ. ಇದಾದ ಕೆಲವೇ ದಿನಗಳಲ್ಲಿ ಅಂದರೆ ಕಳೆದ ಗುರುವಾರ, ತನ್ನ ಸ್ನೇಹಿತೆ ರಿಂಕು ಜೊತೆ ಕಾಡಿಗೆ ಹೋಗಿದ್ದ ಸೋನಿ, ನಾಪತ್ತೆಯಾಗಿದ್ದಳು. ಎರಡು ದಿನಗಳ ಬಳಿಕ ಮಿಸ್ಸಿಂಗ್ ಕೇಸ್​ ದಾಖಲಿಸಿಕೊಂಡ ಪೊಲೀಸರು, ಇಬ್ಬರ ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).