ನ್ಯೂಸ್

ಏಕಾಏಕಿ ಎರಡು ರೈಲುಗಳ ಮುಖಾಮುಖಿ; ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾದ 'ಶ್ವಾನ'| Viral video

Viral video : ರಸ್ತೆಯಲ್ಲಿ ವಾಹನಗಳು ಚಲಿಸುವ ಬಿರುಸಿಗೆ ಈ ಪ್ರಾಣಿಗಳು ಗಾಬರಿಗೊಂಡು ಅಪಘಾತಗಳಿಂದ ಪಾರಾಗಲು ಹೋಗಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವಂತಹ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ. ಅದರಂತೆ ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಅಂದಹಾಗೆ ರೈಲು ಬರುತ್ತಿದ್ದಂತೆ ನಾಯಿಯೊಂದು ಹಳಿಗಳ ಮೇಲೆ ಜಿಗಿದ ಹೃದಯ ವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ದೃಶ್ಯದಲ್ಲಿ ನಾಯಿಯು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಇದ್ದಕ್ಕಿದ್ದಂತೆ ವೇಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಮೀಪಿಸುತ್ತದೆ. ವಿಪರ್ಯಾಸವೆಂಬಂತೆ ಅಲ್ಲಿಯವರೆಗೂ ಸುಮ್ಮನೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ನಾಯಿ, ರೈಲು ಬಂದ ತಕ್ಷಣ ಟ್ರ್ಯಾಕ್​ ಮೇಲೆ ಜಿಗಿದಿದೆ. ಅಲ್ಲಿದ್ದಂತಹ ಸ್ಥಳೀಯರು ನಾಯಿ ರೈಲಿಗೆ ಸಿಲುಕಿ ಪ್ರಾಣಬಿಟ್ಟಿತು ಅನ್ನವಷ್ಟರಲ್ಲಿ ಶ್ವಾನ ಪಕ್ಕದ ಹಳಿಗೆ ಓಡಿದೆ. ಸದ್ಯ ಈ ರೈಲಿನಿಂದ ಅಪಘಾತ ತಪ್ಪಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಪಕ್ಕದ ಹಳಿಯ ವಿರುದ್ಧ ದಿಕ್ಕಿನಿಂದ ಮತ್ತೊಂದು ರೈಲು ವೇಗವಾಗಿ ಬಂದಿದೆ. ಇನ್ನೂ ಕ್ಷಣಾರ್ಧದಲ್ಲಿ ಆ ರೈಲಿನಿಂದಲೂ ಪಾರಾದ ನಾಯಿ ಎರಡೂ ಹಳಿಗಳನ್ನು ದಾಟಿ ಪವಾಡವೆಂಬಂತೆ ಸುರಕ್ಷಿತವಾಗಿ ಪ್ಲಾಟ್‌ಫಾರ್ಮ್‌ನ ಇನ್ನೊಂದು ಬದಿಯನ್ನು ತಲುಪಿದೆ.

ಈ ವಿಡಿಯೋವನ್ನು ಎಕ್ಸ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈ ದೃಶ್ಯವನ್ನು ನೋಡಿದ ಅನೇಕರು ಒಂದೊಂದು ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ. ಅನೇಕ ಬಳಕೆದಾರರು ಇದನ್ನು ಪವಾಡ ಎಂದು ಕರೆದಿದ್ದಾರೆ. ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದ ಯಾರೋ ನಾಯಿಯನ್ನು ಬೆನ್ನಟ್ಟಿದ ನಂತರ ನಾಯಿ ಈ ಸಾಹಸ ಮಾಡಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

(ಏಜೆನ್ಸೀಸ್)