ಒರಿಸ್ಸಾ: ಹಾವುಗಳು ನಾಡಿಗೆ ಬಂದು ಜನರನ್ನು ಹೆದರಿಸುವ ಪ್ರಸಂಗಗಳು ಅನೇಕ. ಅಂಥದ್ದೊಂದು ಪ್ರಸಂಗ ಕಾಮಗಾರಿ ಪ್ರದೇಶವೊಂದರಲ್ಲಿ ಕಂಡುಬಂದಿದ್ದು, ಭಾರಿ ಉದ್ದದ ಎರಡು ಹೆಬ್ಬಾವುಗಳು ಒಂದರ ಬೆನ್ನಿಗೆ ಒಂದರಂತೆ ಪತ್ತೆಯಾಗಿವೆ.
ಒರಿಸ್ಸಾದ ಬೆರ್ಹಂಪುರ್ ಜಿಲ್ಲೆಯ ಪಲ್ಲಿಗುಮುಲ ಗ್ರಾಮದಲ್ಲಿ ಜಲಾಶಯದ ಪ್ರದೇಶದಲ್ಲಿ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿಯೊಂದರ ಮೇಲೆ ಸ್ಥಳೀಯರು ಹಾವೊಂದನ್ನು ಕಂಡಿದ್ದಾರೆ. ತಕ್ಷಣ ಹಾವು ಹಿಡಿಯುವ ಪರಿಸರ ಸಂರಕ್ಷಕ ಸಂಘಟನೆಗೆ ಕರೆ ಮಾಡಿದ್ದಾರೆ.
"ಹಾವುಗಳನ್ನು ಸಂರಕ್ಷಿಸುವ ತಂಡವೊಂದಕ್ಕೆ ರಾತ್ರಿ 9ಕ್ಕೆ ಕರೆಬಂತು. ಹೋಗಿ ನೋಡಿದಾಗ ಒಂದು 7 ಅಡಿ ಉದ್ದದ ಹೆಬ್ಬಾವು ಜೆಸಿಬಿ ಮೇಲೆ ಕೂತಿತ್ತು. ಅದನ್ನು ಸುಲಭವಾಗಿ ಹಿಡಿದರೆ, ಮತ್ತೊಂದು 11 ಅಡಿ ಉದ್ದದ ಹೆಬ್ಬಾವು ಜೆಸಿಬಿಯ ಒಳಗಡೆ ಅಡಗಿ ಕುಳಿತಿದ್ದುದು ಕಂಡುಬಂತು. ನಾಲ್ಕು ಗಂಟೆ ಪ್ರಯತ್ನ ಪಟ್ಟ ನಂತರ ಆ ಹಾವನ್ನೂ ಹಿಡಿದೆವು" ಎಂದು ಹಾವುಗಳ ಸಂರಕ್ಷಕರಲ್ಲೊಬ್ಬರಾದ ಸ್ವಾಧೀನ್ ಕುಮಾರ್ ಸಾಹು ಹೇಳಿದ್ದಾರೆ. ಎರಡೂ ಹಾವುಗಳನ್ನು ಕಾಡಿನ ಒಳಗೆ ಬಿಡಲಾಗಿದೆ.