ನ್ಯೂಸ್

ಹೆದ್ದಾರಿಯಲ್ಲೇ ಅಡ್ಡಗಟ್ಟಿದರು.. ಗನ್​ ತೋರಿಸಿ ಬೆದರಿಸಿ ಕಾರನ್ನೇ ಕೊಂಡೊಯ್ದರು..!

ಗುರುಗ್ರಾಮ: ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ಹಣ-ಆಭರಣ ಕಿತ್ತೊಯ್ಯುವುದು ಹೊಸದೇನಲ್ಲ. ಆದರೆ ಇಲ್ಲೊಂದಿಬ್ಬರು ದುಷ್ಕರ್ಮಿಗಳು ಹೆದ್ದಾರಿಯಲ್ಲೇ ಅಡ್ಡಗಟ್ಟಿದ್ದಲ್ಲದೆ, ಗನ್ ತೋರಿಸಿ ಬೆದರಿಸಿ, ಗುತ್ತಿಗೆದಾರರೊಬ್ಬರ ಕಾರನ್ನೇ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

ಇಂಥದ್ದೊಂದು ಘಟನೆ ಭಾನುವಾರ ರಾತ್ರಿ ದೆಹಲಿಯ ಗುರುಗ್ರಾಮದ ದ್ವಾರಕಾ ಎಕ್ಸ್​ಪ್ರೆಸ್​ ಹೆದ್ದಾರಿಯ ಧನ್​ಕೋಟ್​ ಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ರೋಹ್ಟಕ್​ ಸೆಕ್ಟರ್-15ರಲ್ಲಿ ನೆಲೆಸಿರುವ ಗುತ್ತಿಗೆದಾರ ನವೀನ್​ ಕುಮಾರ್ ಎಂಬವರಿಗೆ ಕಾರು ಸೇರಿದೆ.

ಭಾನುವಾರ ರಾತ್ರಿ ಗುರುಗ್ರಾಮದಿಂದ ರೋಹ್ಟಕ್​ಗೆ ಕಾರಿನಲ್ಲಿ ಬರುತ್ತಿದ್ದಾಗ ದಾರಿಮಧ್ಯೆ ಕಾರು ನಿಲ್ಲಿಸಿದ್ದಾಗ ಎದುರಾದ ಇಬ್ಬರು ಅಪರಿಚಿತರು, ಗನ್​ ತೋರಿಸಿ ಬೆದರಿಸಿ ಕೀ ಕಿತ್ತುಕೊಂಡು ಹ್ಯುಂಡೈ ಕ್ರೇಟಾ ಕಾರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ನವೀನ್​ ಪೊಲೀಸರಿಗೆ ತಿಳಿಸಿದ್ದಾರೆ. ನವೀನ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)