ನ್ಯೂಸ್

ದೇವಸ್ಥಾನದೊಳಕ್ಕೆ ಪ್ರವೇಶಿಸಿ ನಮಾಜ್ ಮಾಡಿದ ಇಬ್ಬರ ವಿರುದ್ಧ ಕೇಸ್ ದಾಖಲು

ಮಥುರಾ: ಉತ್ತರ ಪ್ರದೇಶದ ಮಥುರಾ ಪಟ್ಟಣದ ನಂದಗಾಂವ್ ಪ್ರದೇಶದಲ್ಲಿರುವ ನಂದ ಬಾಬಾ ಮಂದಿರದಲ್ಲಿ ಇಬ್ಬರು ಗುರುವಾರ ನಮಾಜ್ ಮಾಡಿದ ವಿಚಾರ ಬಹಿರಂಗವಾಗಿದೆ. ದೇವಸ್ಥಾನದ ಒಳಗೆ ನಮಾಜ್ ಮಾಡಿದವರನ್ನು ಫೈಜಲ್​ ಖಾನ್ ಮತ್ತು ಮೊಹಮ್ಮದ್ ಚಾಂದ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಈ ಇಬ್ಬರೂ ಗುರುತು ಮರೆಮಾಚಿ ದೇವಸ್ಥಾನದ ಒಳಗೆ ಪ್ರವೇಶಿಸಿ ಅಲ್ಲಿ ನಮಾಜ್ ಮಾಡಿದ ದೃಶ್ಯಗಳು ಈಗ ವೈರಲ್ ಆಗಿವೆ. ದೇವಸ್ಥಾನದ ಮುಖ್ಯ ಅರ್ಚಕರ ಗಮನಕ್ಕೆ ಈ ವಿಷಯ ಬರುತ್ತಲೇ ಎಚ್ಚರಿಸುವ ಕೆಲಸ ಮಾಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಇಂಡಿಯಾ ಟಿವಿ ವರದಿ ಮಾಡಿದೆ.

ಪ್ರಾಥಮಿಕ ಮಾಹಿತಿ ಕಲೆ ಹಾಕಿದ ಪೊಲೀಸರು, ಖಾನ್, ಚಾಂದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಅವರಿಗೆ ದೇವಸ್ಥಾನದೊಳಗೆ ಪ್ರವೇಶಿಸುವುದಕ್ಕೆ ನೆರವಾದ ಮುಕೇಶ್ ಗೋಸ್ವಾಮಿ ಮತ್ತು ಶಿವಹರಿ ಗೋಸ್ವಾಮಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ, ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಭದ್ರತೆ ಒದಗಿಸಿದ್ದು, ಅಹಿತಕರ ಘಟನೆಗಳಾದಂತೆ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)