ನ್ಯೂಜಿಲೆಂಡ್​ನ ಮೊಟ್ಟಮೊದಲ ಭಾರತೀಯ ಮೂಲದ ಸಚಿವೆ ಪ್ರಿಯಾಂಕಾ ರಾಧಾಕೃಷ್ಣನ್​

Priyanca-Radhakrishnan
Published on

ಮೆಲ್ಬೋರ್ನ್​: ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿಯಾಗಿ ಜಸಿಂದಾ ಆರ್ಡ್ರೆನ್ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಅವರ ಸಚಿವ ಸಂಪುಟ ಸಹೋದ್ಯೋಗಿಗಳಾಗಿ ಐವರು ಹೊಸ ಸಚಿವರು ನೇಮಕವಾಗಿದೆ. ಅವರ ಪೈಕಿ ಭಾರತೀಯ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ (41) ಒಬ್ಬರು. ನ್ಯೂಜಿಲೆಂಡ್​ನಲ್ಲಿ ಸಚಿವರಾದ ಮೊಟ್ಟ ಮೊದಲ ಭಾರತೀಯೆ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ.

ಪ್ರಿಯಾಂಕಾ ಭಾರತದಲ್ಲಿ ಜನಿಸಿದ್ದು, ಸಿಂಗಾಪುರದಲ್ಲಿ ಶಾಲಾ ಶಿಕ್ಷಣ ಪಡೆದರು. ನ್ಯೂಜಿಲ್ಯಾಂಡ್​ಗೆ ಉನ್ನತ ಶಿಕ್ಷಣ ಪಡೆದ ಅವರು ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ, ವಲಸೆ ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದರು. 2017ರಲ್ಲಿ ಅವರು ಲೇಬರ್ ಪಾರ್ಟಿ ಮೂಲಕ ಸಂಸತ್​ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಎಥಿಕ್ಸ್ ಕಮ್ಯೂನಿಟೀಸ್​ ಸಚಿವರ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು.

ಹೊಸ ಸಚಿವ ಸಂಪುಟ ಶುಕ್ರವಾರ ಮೊದಲ ಸಭೆ ನಡೆಸಲಿದ್ದು, ಅಂದೇ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ಷಮತೆ ತೋರದ ಸಚಿವರಿಗೆ ಸಂಪುಟದಲ್ಲಿ ಸ್ಥಾನ ಉಳಿಯದು ಎಂದು ಅಧಿಕಾರ ಸ್ವೀಕಾರಕ್ಕೂ ಮೊದಲೇ ಆರ್ಡ್ರೆನ್ ಎಚ್ಚರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net