ನ್ಯೂಸ್

ಸಿಬಿಐ ಅಧಿಕಾರಿ ಹೆಸರಲ್ಲಿ ವಿಡಿಯೋ ಕಾಲ್! ಅರೆಸ್ಟ್ ವಾರೆಂಟ್ ಜಾರಿಗೊಳಿಸುವುದಾಗಿ 41 ಲಕ್ಷ ರೂ. ವಂಚನೆ | Frauds

ಮೋಹನ್​ ಶೆಟ್ಟಿ

ಶಿವಮೊಗ್ಗ: ಸಿಬಿಐ ಅಧಿಕಾರಿ ಹೆಸರಲ್ಲಿ ವಿಡಿಯೋ ಕಾಲ್ ಮಾಡಿ ಬಂಧನದ ವಾರೆಂಟ್ ಜಾರಿ ಮಾಡುವುದಾಗಿ ಹೆದರಿಸಿ, ಬರೋಬ್ಬರಿ 41 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ಇಬ್ಬರನ್ನು (Frauds) ಸದ್ ಸಿಇಎನ್ ಠಾಣೆ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು, ಆರೋಪಿಗಳಿಂದ 23.89 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಮೌನಾತ್ ಬಂಜನ್ ಜಿಲ್ಲೆ ವಲಿದಪುರ ನಗರದ ಮೊಹಮ್ಮದ್ ಅಹಮದ್(45) ಮತ್ತು ಅಜಂಗಡ ಜಿಲ್ಲೆಯ ಮೊಹುಡಿಯಾ ಗ್ರಾಮದ ಅಭಿಷೇಕ್ ಕುಮಾರ್(27) ಬಂಧಿತರು. ಕಳೆದ ಸೆ.27ರಂದು ಗೋಪಾಳದ ಎಲ್.ಎಸ್. ಆನಂದ್ ಎಂಬುವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ವಿಡಿಯೋ ಕಾಲ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಂಬರ್‌ನಲ್ಲಿ ದೊಡ್ಡ ಮಟ್ಟದ ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ. ಹಾಗಾಗಿ ತಮ್ಮ ಮೇಲೆ ದೂರು ದಾಖಲಾಗಿದ್ದು, ಬಂಧಿಸಲು ವಾರೆಂಟ್ ಜಾರಿ ಆಗಿ, ನಿಮ್ಮೆಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಇದರಿಂದ ಹೊರಬರಬೇಕಾದರೆ ತಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಆರೋಪಿಗಳು ತಿಳಿಸಿದ್ದರು.

ಬಳಿಕ ಬರೋಬ್ಬರಿ 41 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದರು. ಈ ಬಗ್ಗೆ ಆನಂದ್ ಅವರು ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್‌ಪಿ ಕೆ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ ಇನ್‌ಸ್ಪೆಕ್ಟರ್ ಮಂಜುನಾಥ ನೇತೃತ್ವದಲ್ಲಿ ಎಎಸ್‌ಐ ಶೇಖರ್, ಸಿಬ್ಬಂದಿಗಳಾದ ಆರ್. ವಿಜಯ್, ಬಿ.ರವಿ. ಬಿ.ಎಸ್. ಶರತ್‌ಕುಮಾರ್ ಅವರನ್ನು ಒಳಗೊಂಡ ತನಿಖಾ ತಂಡ ಕಾರ್ಯಾಚರಣೆ ಮಾಡಿ ನ.12ರಂದೇ ಉತ್ತರ ಪ್ರದೇಶದಲ್ಲಿ ಬಂಧಿಸಿ 23,89,751 ರೂ. ಜಪ್ತಿ ಮಾಡಿಕೊಂಡಿದೆ.