ನ್ಯೂಸ್

ದೇಶದಲ್ಲಿ ಹೊಸ ಆತಂಕ: ನಿಫಾ ವೈರಸ್​ಗೆ ಪಕ್ಕದ ಕೇರಳದಲ್ಲೇ ಇಬ್ಬರು ಬಲಿ!

ನವದೆಹಲಿ: ದೇಶದಲ್ಲಿ ಮತ್ತೊಂದು ಆತಂಕ ಆವರಿಸಿದ್ದು, ಮಾರಕ ನಿಫಾ ವೈರಸ್​ಗೆ ಕೇರಳದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಿಫಾ ವೈರಸ್​ ಸೋಂಕಿನಿಂದಾದ ಮೊದಲ ಸಾವು ಆ. 30, ಎರಡನೇ ಸಾವು ಸೆ. 11ರಂದು ಸಂಭವಿಸಿದೆ. ಮಾತ್ರವಲ್ಲ ಸದ್ಯ ದೇಶದಲ್ಲಿ ನಾಲ್ವರು ನಿಫಾ ವೈರಸ್ ಸೋಂಕಿಗೆ ಒಳಗಾಗಿರುವ ಶಂಕೆ ಇದ್ದು, ಅವರನ್ನು ತೀವ್ರ ನಿಗಾದಲ್ಲಿ ಇರಿಸಿ, ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ನಿಫಾ ವೈರಸ್ ಪರಿಸ್ಥಿತಿ ನಿಯಂತ್ರಣ ಸಲುವಾಗಿ ಕೇಂದ್ರದಿಂದ ಕೇರಳಕ್ಕೆ ತಂಡವನ್ನು ಕಳುಹಿಸಿಕೊಡಲಾಗಿದ್ದು, ಅವರು ಅಲ್ಲಿನ ರಾಜ್ಯ ತಂಡದ ಜತೆ ಸಮನ್ವಯ ನಡೆಸಿ ಸಹಾಯ ಮಾಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಬಾವಲಿಗಳಿಂದ ಈ ವೈರಸ್ ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಸಲುವಾಗಿ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದೂ ಮಾಂಡವೀಯ ಮಾಹಿತಿ ನೀಡಿದ್ದಾರೆ.

ರಾಜ್ಯ ಕೊಜಿಕ್ಕೋಡ್​ನಲ್ಲಿ ಸಂಭವಿಸಿರುವ ಎರಡು ಅಸಹಜ ಸಾವು ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಯಾರೂ ಆತಂಕಗೊಳ್ಳಬೇಡಿ, ಆದರೆ ಎಚ್ಚರಿಕೆಯಿಂದಿರುವುದು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಮಹತ್ವದ ಕ್ರಮ, ಆರೋಗ್ಯ ಇಲಾಖೆ ಕೈಗೊಳ್ಳುವ ಕ್ರಮಗಳಿಗೆ ಎಲ್ಲರೂ ಸಹಕರಿಸಿ ಎಂದು ಕೇರಳ ಸಿಎಂ ಹೇಳಿದ್ದಾರೆ.

ಕೊಜಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ 2018 ಮತ್ತು 2021ರಲ್ಲಿ ನಿಫಾ ವೈರಸ್ ಹಾವಳಿ ಉಂಟಾಗಿದ್ದು, ಈಗ ಮತ್ತದೇ ಪ್ರದೇಶದಲ್ಲಿ ಇನ್ನೊಮ್ಮೆ ವೈರಸ್ ಹಾವಳಿ ಉಂಟಾಗಿರುವುದು ಆತಂಕ ಮೂಡಿಸಿದೆ.