ಹನುಮಸಾಗರ (ಕೊಪ್ಪಳ): 9 ವರ್ಷದ ಮಕ್ಕಳಿಬ್ಬರು ರಾಂಪುರ ಬಳಿಯ ಕಲ್ಲುಕ್ವಾರಿಯಲ್ಲಿದ್ದ ನೀರಿನಲ್ಲಿ ಬಿದ್ದು ಸೋಮವಾರ ದುರಂತ ಅಂತ್ಯ ಕಂಡಿದ್ದು, ದೀಪಾವಳಿ ಸಂಭ್ರಮದಲ್ಲಿರಬೇಕಿದ್ದ ಕುಟುಂಬ ಮಕ್ಕಳ ಸಾವಿನ ಸುದ್ದಿ ಕೇಳಿ ಕಂಗೆಟ್ಟಿದೆ.
ಮಹಾಂತೇಶ ಮಲ್ಲಪ್ಪ ಮಾದರ (9), ವಿಜಯ ಪಡಿಯಪ್ಪ ಮಾದರ(9) ಮೃತ ದುರ್ದೈವಿಗಳು. ನಾಲ್ವರು ಮಕ್ಕಳು ಕಲ್ಲುಕ್ವಾರಿಯಲ್ಲಿ ನಿಂತಿದ್ದ ನೀರಿನ ಬಳಿ ಹೋಗಿದ್ದಾರೆ. ಅದರಲ್ಲಿ ಒಬ್ಬ ನೀರಿನಲ್ಲಿ ಬಿದ್ದು ಮುಳುಗುತ್ತಿರುವುದನ್ನು ಕಂಡು ಉಳಿದ ಮೂವರೂ ಅದರಲ್ಲಿ ಜಿಗಿದಿದ್ದಾರೆ. ಇಬ್ಬರು ಸ್ಥಳದಲ್ಲೇ ಸಾವಿಗಿಡಾಗಿದ್ದು, ಇನ್ನಿಬ್ಬರನ್ನು ಪಕ್ಕದ ಜಮೀನಿನಲ್ಲಿ ಇದ್ದವರು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡ ರಾಘವೇಂದ್ರ ಹಾಗೂ ಸೃಷ್ಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲುಕ್ವಾರಿಯಲ್ಲಿ ಬೃಹತಾಕಾರದ ತೆಗ್ಗು ಬಿದ್ದು ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಮಲ್ಲಪ್ಪ ಮಾದರ ಅವರ ಮೂವರು ಮಕ್ಕಳಲ್ಲಿ ಮಹಾಂತೇಶ ಹಿರಿಯ ಮಗ. ಪಡಿಯಪ್ಪ ಅವರಿಗೆ ಒಬ್ಬನೇ ಮಗನಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದೀಪಾವಳಿ ಸಂಭ್ರಮದಲ್ಲಿ ಇರಬೇಕಾದ ರಾಂಪೂರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮಕ್ಕಳು ಕಲ್ಲುಕ್ವಾರಿ ಬಳಿ ಏಕೆ? ಹೋದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.