ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್ನ ಐಕಾನ್ ಸ್ಟಾರ್, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ 2’ ರಿಲೀಸ್ ಬಗ್ಗೆ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿದೆ. ಈ ಮೊದಲು ಚಿತ್ರತಂಡ ತಿಳಿಸಿದಂತೆ ಸಿನಿಮಾ ಇದೇ ಆಗಸ್ಟ್ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಚಿತ್ರದ ಕೆಲವು ಕೆಲಸಗಳು ಇನ್ನೂ ಬಾಕಿ ಉಳಿದ ಕಾರಣ ಇದೀಗ ರಿಲೀಸ್ ಡೇಟ್ ಅನ್ನು ಡಿಸೆಂಬರ್ 06, 2024ಕ್ಕೆ ಮುಂದೂಡಲಾಗಿದೆ. ಆದ್ರೆ, ಈ ಬಗ್ಗೆ ಚಿತ್ರ ತಯಾರಕರ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಡಬಲ್ ಧಮಾಕಾ ದೊರಕಿದೆ.
ಪ್ಯಾನ್ ಇಂಡಿಯಾ ಚಿತ್ರದ ರಿಲೀಸ್ ಡೇಟ್ ಹಾಗೂ ಚಿತ್ರೀಕರಣ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಮೊದಲ ದಿನದಿಂದಲೂ ಭಾರೀ ಗೊಂದಲವಿತ್ತು. ಈ ಕುರಿತಂತೆ ಜಾಲತಾಣಗಳಲ್ಲಿ ಮಾಹಿತಿ ನೀಡುವಂತೆ ಚಿತ್ರತಂಡವನ್ನು ಒತ್ತಾಯಿಸಿದ್ದ ಸಿನಿಪ್ರಿಯರು, ಆಗಾಗ್ಗೆ ಅಲ್ಲು ಅರ್ಜುನ್ ಪೋಸ್ಟರ್ ಹಂಚಿಕೊಳ್ಳುವ ಮುಖೇನ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಿದ್ದರು. ಇದೆಲ್ಲವನ್ನೂ ಗಮನಿಸಿದ್ದ ಚಿತ್ರತಂಡ, ಇದೀಗ ಎರಡು ಸೂಪರ್ ಸುದ್ದಿಯನ್ನು ಒಂದೇ ಬಾರಿಗೆ ಹಂಚಿಕೊಂಡಿದೆ.
ಚಿತ್ರದ ಚಿತ್ರೀಕರಣ ಕಡೆಯ ಹಂತವನ್ನು ತಲುಪಿದ್ದು, ಇದೀಗ ಕ್ಲೈಮ್ಯಾಕ್ಸ್ ಭಾಗವನ್ನು ಹೈದರಾಬಾದ್ನ ಬೃಹತ್ ಸೆಟ್ನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಇದರೊಟ್ಟಿಗೆ ಇದೇ ಡಿಸೆಂಬರ್ 06ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಸದ್ಯ ಈ ಎರಡು ಅಪ್ಡೇಟ್ ನೋಡಿದ ಫ್ಯಾನ್ಸ್ ಭಾರೀ ಸಂತಸ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ನಟನ ಚಿತ್ರವನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).