ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿನ ಕ್ಯಾಪಿಟಲ್ ಹಿಲ್ನಲ್ಲಿ ಎರಡು ದಿನಗಳ ಹಿಂದೆ ನಡೆದ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂರಾರು ಬೆಂಬಲಿಗರ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್ ಶಾಶ್ವತವಾಗಿ ಟ್ರಂಪ್ ಖಾತೆಯನ್ನು ತೆಗೆದುಹಾಕಿದೆ.
ಟ್ರಂಪ್ ಅವರ ಇತ್ತೀಚಿನ ಟ್ವೀಟ್ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗಾಗಲೇ ಪೂರ್ಣ ಹತೋಟಿಗೆ ಬಂದಿರುವ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಛರಿಕಾ ಕ್ರಮವಾಗಿ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಲಾಗಿದೆ ಎಂದು ಟ್ವಿಟರ್ ತಿಳಿಸಿದೆ.
ಟ್ರಂಪ್ ಬೆಂಬಲಿಗರ ಕ್ಯಾಪಿಟಲ್ ಹಿಲ್ ಹಿಂಸಾಚಾರದ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ವಿರುದ್ಧ ಕ್ರಮಕ್ಕೆ ಭಾರಿ ಒತ್ತಾಯಗಳು ಕೇಳಿಬಂದಿತ್ತು. ಇದರ ನಡುವೆಯೇ 88 ಮಿಲಿಯನ್ ಫಾಲೋವರ್ಸ್ ಹೊಂದಿರುವ ಟ್ರಂಪ್ ಟ್ವಿಟರ್ ಖಾತೆಯನ್ನು ಬುಧವಾರ ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಅಲ್ಲದೆ, ಪ್ರಚೋದನೆಯಿಂದಾಗಿ ಹಿಂಸಾಚಾರ ಮತ್ತಷ್ಟು ಹೆಚ್ಚಾದಲ್ಲಿ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡುವ ಎಚ್ಚರಿಕೆಯನ್ನು ನೀಡಲಾಗಿತ್ತು.
ಗುರುವಾರ ಟ್ರಂಪ್ ಖಾತೆ ಮತ್ತೆ ಕಾರ್ಯಾರಂಭ ಮಾಡಿತು. ಅಲ್ಲದೆ, ನೀವು ನೀಡುವ ಹೇಳಿಕೆಗಳ ಮೇಲೆ ನಿರಂತರ ನಿಗಾ ಇರಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಇದೀಗ ಟ್ರಂಪ್ ಖಾತೆಯನ್ನೇ ಶಾಶ್ವತವಾಗಿ ಟ್ವಿಟರ್ ತೆಗೆದುಹಾಕಿದೆ. ಅಮೆರಿಕ ಜನರೊಂದಿಗೆ ಸಂಭಾಷಣೆ ನಡೆಸಲು ಟ್ರಂಪ್ ಅವರಿಗೆ ಟ್ವಿಟರ್ ಉತ್ತಮ ವೇದಿಕೆಯಾಗಿತ್ತು. ಆದರೆ, ತಮ್ಮ ಸರ್ಕಾರದ ಉತ್ತಮ ಕಾರ್ಯಗಳ ಪ್ರಚಾರಕ್ಕೆ ಹಾಗೂ ಜನರ ಕಷ್ಟಗಳಿಗೆ ಬಳಸಿಕೊಳ್ಳದೆ, ಬಹುತೇಕ ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿ ಹರಡಲು ಟ್ರಂಪ್ ಬಳಸಿಕೊಳ್ಳುತ್ತಿದ್ದರು. ಈ ಹಿಂದೆ ಅನೇಕ ಬಾರಿ ಟ್ವಿಟರ್ ಎಚ್ಚರಿಕೆಯನ್ನು ನೀಡಿ ಟ್ವೀಟ್ ಡಿಲೀಟ್ ಮಾಡಿದ ಪ್ರಸಂಗಗಳು ನಡೆದಿವೆ.
ಕಳೆದ ಬುಧವಾರ ಡೆಮಾಕ್ರಟಿಕ್ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ವಿಜಯವನ್ನು ಕಾಂಗ್ರೆಸ್ ಸಭೆ ಪ್ರಮಾಣೀಕರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡ ಎದುರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವಿಗೀಡಾಗಿದ್ದರು. ಅಲ್ಲದೆ, ಅನೇಕರು ಗಾಯಗೊಂಡಿದ್ದರು. ಸ್ವತಃ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ನಾಯಕರೇ ಬೆಂಬಲಿಗರ ನಡೆಯನ್ನು ಕಟುವಾಗಿ ಟೀಕಿಸಿ ರಾಜೀನಾಮೆಗಳನ್ನು ನೀಡಿದ್ದಾರೆ.
ಪ್ರತಿಭಟನೆ ತಣ್ಣಗಾದ ಬಳಿಕ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಗೆಲವನ್ನು ಪ್ರಮಾಣೀಕರಿಸಲಾಗಿದ್ದು, ಜನವರಿ 20ರಂದು ಬೈಡೆನ್ ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಅದೇ ದಿನ ಭಾರತ ಮೂಲದ ಕಮಲ್ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. (ಏಜೆನ್ಸೀಸ್)