ನ್ಯೂಸ್

AIADMK ಜೊತೆ ದಳಪತಿ ವಿಜಯ್ ಮೈತ್ರಿ ಮಾಡಿಕೊಳ್ಳದಿದ್ದರೇ ಟಿವಿಕೆ ಸರ್ವನಾಶವಾಗಲಿದೆ; ಆರ್​​ ಬಿ ಉದಯಕುಮಾರ್

ಚೆನ್ನೈ: ತಮಿಳುನಾಡಿನ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ(AIADMK) ಜೊತೆ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಮೈತ್ರಿ ಮಾಡಿಕೊಳ್ಳದಿದ್ದರೇ ನಾಶವಾಗಲಿದೆ ಎಂದು ಬುಧವಾರ(ಅ. 22) ಎಐಎಡಿಎಂಕೆ ನಾಯಕ ಆರ್.ಬಿ.ಉದಯಕುಮಾರ್ ಹೇಳಿದ್ದಾರೆ.

ದೀಪಾವಳಿ ಆಚರಣೆಯ ಭಾಗವಾಗಿ ಮಧುರೈನ ತೆಪ್ಪಕುಲಂ ಮುಕ್ತೀಶ್ವರ ದೇವಸ್ಥಾನದಲ್ಲಿ 'ಅಮ್ಮ ಚಾರಿಟೇಬಲ್ ಟ್ರಸ್ಟ್' ಪರವಾಗಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟ ಡಿಎಂಕೆ ಸರ್ಕಾರವನ್ನು ಉರುಳಿಸುವ ಪ್ರಮುಖ ಉದ್ದೇಶದಿಂದ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಶೀಘ್ರದಲ್ಲೇ ಹೆಚ್ಚಿನ ಪಕ್ಷಗಳು ನಮ್ಮ ಮೈತ್ರಿಕೂಟಕ್ಕೆ ಸೇರಲಿವೆ ಎಂದು ತಿಳಿಸಿದ್ದಾರೆ.

ಟಿವಿಕೆ ಮೈತ್ರಿಕೂಟಕ್ಕೆ ಸೇರಲು ಇದು ಸರಿಯಾದ ಸಮಯ ಎಂಬುದನ್ನು ವಿಜಯ್ ಅರಿತುಕೊಳ್ಳಬೇಕು. ಟಿವಿಕೆ ಎಐಎಡಿಎಂಕೆ ಮೈತ್ರಿಕೂಟಕ್ಕೆ ಸೇರದಿದ್ದರೆ, ವಿಧಾನಸಭಾ ಚುನಾವಣೆಯ ನಂತರ ಪಕ್ಷ ನಾಶವಾಗುತ್ತದೆ. ಮತ್ತು ಡಿಎಂಕೆ ಅದನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದರು.

ಮೆಗಾಸ್ಟಾರ್ ಚಿರಂಜೀವಿ ಆಂಧ್ರಪ್ರದೇಶದಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದಾಗ, ಚುನಾವಣಾ ಮೈತ್ರಿಕೂಟದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳದ ಕಾರಣ ರಾಜಕೀಯದಲ್ಲಿ ಯಶಸ್ಸನ್ನು ಸಾಧಿಸಲಾಗಲಿಲ್ಲ. ಜನ ಸೇನಾ ನಾಯಕ ಪವನ್ ಕಲ್ಯಾಣ್ ಅವರ ಮೈತ್ರಿಕೂಟದ ನಿರ್ಧಾರವು ಪಕ್ಷವನ್ನು ಸುಧಾರಿಸಿದ್ದಲ್ಲದೆ, ಅವರು ಉಪಮುಖ್ಯಮಂತ್ರಿಯಾಗಲು ಕಾರಣವಾಯಿತು ಎಂಬುದನ್ನು ವಿಜಯ್ ನೆನಪಿನಲ್ಲಿಡಬೇಕು ಎಂದು ಮೈತ್ರಿ ಸೇರುವಂತೆ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)