ನ್ಯೂಸ್

ಹೆಲ್ಮೆಟ್​ ಧರಿಸುವ ಸವಾರರಿಗೆ ಎಲ್​ಇಡಿ ಟಿವಿ ಗಿಫ್ಟ್! ಸಂಚಾರ ಪೊಲೀಸರಿಂದ ಬಂಪರ್​ ಘೋಷಣೆ​ | TV Gift

TV Gift : ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್​ ಧರಿಸುವುದು ಬಹಳ ಮುಖ್ಯ. ಇಲ್ಲವಾದರೆ ಅಪಘಾತ ಸಂಭವಿಸಿದಾಗ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈ ಸಣ್ಣ ಲಾಜಿಕ್ ಗೊತ್ತಿದ್ದರೂ ಅನೇಕರು ಹೆಲ್ಮೆಟ್ ಧರಿಸುವುದಿಲ್ಲ. ಈ ಬಗ್ಗೆ ಸಂಚಾರಿ ಪೊಲೀಸರು ಎಷ್ಟೇ ಹೇಳಿದರು ಕೂಡ ಕೆಲ ಸವಾರರು ಕ್ಯಾರೆ ಎನ್ನುತ್ತಿಲ್ಲ. ಎಷ್ಟೇ ದಂಡ ಹಾಕಿದರೂ ಕೆಲವರು ಬದಲಾಗುತ್ತಿಲ್ಲ. ಬದಲಾಗಿ ಅದೇ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ.

ಹೆಲ್ಮೆಟ್​​ ಧರಿಸುವುದು ಆರಾಮದಾಯಕವಲ್ಲ ಮತ್ತು ಕೂದಲು ಉದುರುತ್ತೆ ಎಂಬ ನಾನಾ ಕಾರಣಗಳಿಂದ ಹೆಲ್ಮೆಟ್ ಧರಿಸುವುದಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ನಿಯಂತ್ರಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೂ ಜನ ಕೇಳುತ್ತಿಲ್ಲ. ಆದರೆ ಇತ್ತೀಚೆಗೆ ಸಂಚಾರ ಪೊಲೀಸರು ಒಂದು ಉಪಾಯವನ್ನು ಮಾಡಿದ್ದಾರೆ. ಅದೇನೆಂದರೆ ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಯಾವುದೋ ಸಣ್ಣ ಉಡುಗೊರೆಯಲ್ಲ ಅದು ಎಲ್​ಇಡಿ ಟಿವಿಯನ್ನು ಸಂಚಾರಿ ಪೊಲೀಸರು ಕೊಡುತ್ತಿದ್ದಾರೆ. ನಾವೀಗ ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಡಿಸೆಂಬರ್ 1 ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಅಧಿಕಾರಿಗಳು ಘೋಷಿಸಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ ಆದೇಶ ಹೊರಡಿಸಲಾಗಿದೆ. ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಪ್ರಮುಖ ಪ್ರದೇಶಗಳಲ್ಲಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಸಹ ಅಂಟಿಸಲಾಗಿದೆ. ಇವುಗಳ ಜತೆಗೆ ಸಂಚಾರ ಪೊಲೀಸರು ಜಿಲ್ಲೆಯಾದ್ಯಂತ ಕೆಲ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿದ್ದಾರೆ. ಹೆಲ್ಮೆಟ್ ಧರಿಸಿದವರನ್ನು ಪ್ರೋತ್ಸಾಹಿಸಲು ಹೂವುಗಳು, ಚಾಕೊಲೇಟ್‌ಗಳು ಮತ್ತು ಆಟಿಕೆಗಳನ್ನು ನೀಡುವ ಮೂಲಕ ಸನ್ಮಾನಿಸಲಾಗಿದೆ. ವೆಲ್ಲೂರು ಡಿಎಸ್ಪಿ ಪೃಥ್ವಿರಾಜ್ ಸೌಕನ್ ಅಧ್ಯಕ್ಷತೆಯಲ್ಲಿ ಸಂಚಾರ ಪೊಲೀಸರು ವಿವಿಧ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ವೆಲ್ಲೂರು ಗ್ರೀನ್ ಸರ್ಕಲ್‌ನಲ್ಲಿ ಆಟಿಕೆಗಳನ್ನು ಇಟ್ಟುಕೊಂಡು ಜಾಗೃತಿ ಮೂಡಿಸಲಾಯಿತು ಮತ್ತು ಎಲ್ಲರೂ ಹೆಲ್ಮೆಟ್ ಧರಿಸಿ ಬರುವಂತೆ ಸಂಚಾರ ಪೊಲೀಸರು ತಿಳಿಸಿದರು. ಹೆಲ್ಮೆಟ್ ಧರಿಸಿ ಬಂದವರಿಗೆ ಆಟಿಕೆ, ಪೆನ್ನುಗಳನ್ನೂ ನೀಡಲಾಯಿತು. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದವರಿಗೆ ಕರಪತ್ರವನ್ನು ನೀಡಿ ಜಾಗೃತಿ ಕೂಡ ಮೂಡಿಸಲಾಯಿತು. ಇನ್ನು ಡಿಸೆಂಬರ್ 1 ರಿಂದ ಹೆಲ್ಮೆಟ್ ಧರಿಸಿ ಬರುವವರನ್ನು ಗುರುತಿಸಿ ಅವರ ವಾಹನ ಸಂಖ್ಯೆಗಳನ್ನು ದಾಖಲಿಸಲಾಗುವುದು ಎಂದು ಸಂಚಾರ ಪೊಲೀಸ್ ಇನ್ಸ್​ಪೆಕ್ಟರ್ ರಜನಿ ತಿಳಿಸಿದ್ದಾರೆ. ಅಲ್ಲದೇ ಲಾಟರಿ ಮೂಲಕ ಆಯ್ಕೆ ಮಾಡಿ ದೊಡ್ಡ ಎಲ್​ಇಡಿ ಟಿವಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ವೆಲ್ಲೂರಿನಲ್ಲಿ ಸಂಚಾರ ನಿಯಮ ಪಾಲಿಸುವವರಿಗೆ ಟ್ರಾಫಿಕ್ ಪೊಲೀಸರು ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. (ಏಜೆನ್ಸೀಸ್​)