ನ್ಯೂಸ್

ಟನಲ್ ರಸ್ತೆ ಯೋಜನೆಗೆ ಬಿಜೆಪಿ ವಿರೋಧ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಟನಲ್ ರಸ್ತೆ ಯೋಜನೆ ಬಗ್ಗೆ ಬಿಜೆಪಿಯವರು ಮಾಡುತ್ತಿರುವ ವಿರೋಧ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟನಲ್ ರಸ್ತೆ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಈಗಾಗಲೇ ಉಪಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಕಳವಳಗಳನ್ನು ಪರಿಶೀಲಿಸಿ, ಒಮ್ಮತಕ್ಕೆ ಬರಲು ನಾಯಕರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.

ಯೋಜನೆಗೆ ಸಾರ್ವಜನಿಕರ ವಿರೋಧವಿಲ್ಲ

ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿಲ್ಲ. ಆದರೆ, ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನು ವಿರೋಧಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಈ ಯೋಜನೆಗೆ ವಿರೋಧ ಏಕೆ ವ್ಯಕ್ತವಾಗಬೇಕು? ಇದೇ ರೀತಿಯ ಟನಲ್ ಯೋಜನೆಗಳನ್ನು ಅನೇಕ ದೇಶದಲ್ಲಿಯೂ ಕೈಗೊಳ್ಳಲಾಗಿದೆ. ಅಲ್ಲಿನ ಜನರು ಹೀಗೆ ವಿರೋಧಿಸಿಲ್ಲ ಎಂದರು.

ಇನ್ನು ಟನಲ್ ಯೋಜನೆ ಶ್ರೀಮಂತರನ್ನು ಗಮನದಲ್ಲಿರಿಸಿಕೊಂಡು ನಿರ್ಮಿಸಲಾಗುತ್ತಿದೆ ಎಂದು ದೂರು ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಟನಲ್ ಯೋಜನೆಯನ್ನು ಕಾರು, ಬಸ್, ದ್ವಿಚಕ್ರ ವಾಹನ, ಕಾಲ್ನಡಿಗೆಯವರಿಗೂ ಅನುಕೂಲವಾಗಲಿ ಎಂದು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.