ತುಮಕೂರು: ಪತ್ನಿಯ ಕಾಟಕ್ಕೆ ಬೇಸತ್ತು ಇಂಜಿನಿಯರ್ ಒಬ್ಬರು ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ತುಮಕೂರಿನ ಕೆ.ಬಿ.ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ.
ಮಂಜುನಾಥ್ (38) ನೇಣುಬಿಗಿದುಕೊಂಡು ಸಾವಿಗೆ ಶರಣಾದ ದುರ್ದೈವಿ. ಇವರು ಬೆಂಗಳೂರಿನ ಬಿಎಂಆರ್ಸಿಎಲ್ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕಾಳನ್ನು ಮದುವೆಯಾಗಿದ್ದರು. ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು.
ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಮದುವೆಯಾದ ಬಳಿಕ ಮಂಜುನಾಥ್ಗೆ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇಪದೆ ಪ್ರಿಯಾಂಕಾ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಳು ಎಂದು ಹೇಳಲಾಗಿದೆ.
ಪತ್ನಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಮಂಜುನಾಥ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದು, ನನಗೆ ಅವಳ ಜತೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಮನೆಯಲ್ಲಿ ಆಕೆಯ ಹಾಳಿಯನ್ನು ತಾಳಲಾರದೇ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಮೆಸೇಜ್ ಮಾಡಿದ್ದಾರೆ.
ಆರೋಪಿ ಪತ್ನಿ ಪ್ರಿಯಾಂಕಾ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.