ನ್ಯೂಸ್

ಇತರ ಧರ್ಮ ಪಾಲನೆ; ನಾಲ್ವರು 'ಹಿಂದೂಯೇತರ' ನೌಕರರನ್ನು ಅಮಾನತುಗೊಳಿಸಿದ ಟಿಟಿಡಿ| tirupati

ತಿರುಪತಿ; ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಿದ್ದರು ಎಂದು ಆರೋಪಿಸಿ, ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ ನಾಲ್ವರು ಸಿಬ್ಬಂದಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಇತರ ಧರ್ಮ ಪಾಲಿಸೋದು ಟ್ರಸ್ಟ್‌ನ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಆಂತರಿಕ ತನಿಖೆಯ ಬಳಿಕವೇ ನಾಲ್ವರು ಉದ್ಯೋಗಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಮಾನತುಗೊಂಡ ನೌಕರರು ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಧಾರ್ಮಿಕ ನಡವಳಿಕೆಯನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ಟ್ರಸ್ಟ್ ಹೇಳಿಕೆ ನೀಡಿದೆ. ಬಿ. ಅಲಿಜರ್, ಎಸ್. ರೋಸ್ಸಿ, ಎಂ.ಪ್ರೇಮಾವತಿ, ಡಾ.ಜಿ.ಅಸುಂತ ಅಮಾನತುಗೊಂಡ ನೌಕರರು ಎಂದು ಟಿಟಿಡಿ ಅಧಿಕೃತ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಮಂಡಳಿಯು ನಡೆಸುತ್ತಿರುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರನ್ನು ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲಾಗುವುದು ಅಥವಾ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಟಿಟಿಡಿ ಮಾಹಿತಿ ನೀಡಿತ್ತು. ಅಮಾನತುಗೊಂಡ ನೌಕರರು, ಸಂಸ್ಥೆಯ ನೀತಿ ಸಂಹಿತೆಯನ್ನು ಪಾಲಿಸದ ಮತ್ತು ಹಿಂದೂ ಧಾರ್ಮಿಕ ಸಂಘಟನೆಯ ನೌಕರರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಬೇಜವಾಬ್ದಾರಿಯಿಂದ ವರ್ತಿಸಿರುವುದು ಬೆಳಕಿಗೆ ಬಂದಿದೆ.

(ಏಜೆನ್ಸೀಸ್)

ಟಿಟಿಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂಯೇತರ ನೌಕರರನ್ನು ತೆಗೆದು ಹಾಕಲಾಗುವುದು. ಇವರನ್ನು ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.