ನ್ಯೂಸ್

ಲಾಕ್​ಡೌನ್​ ಸಮಯದಲ್ಲಿ ಸರ್ಕಾರದ ನಿರ್ದೇಶನ ಪಾಲಿಸದ ತಿರುಪತಿ ದೇಗುಲ ಮಂಡಳಿ, ಕಾರ್ಮಿಕ ಸಂಘಟನೆಗಳ ಆಕ್ರೋಶ

rameshmysuru

ತಿರುಪತಿ: ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇಗುಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನ ಕೂಡ ಲಾಕ್​ಡೌನ್​ ಎಫೆಕ್ಟ್​ಗೆ ಒಳಗಾಗಿದೆ. ದಿನವೂ ಕೋಟಿಗಟ್ಟಲೇ ಮೊತ್ತ ಭಕ್ತರಿಂದ ಇಲ್ಲಿನ ದೇಗುಲಗಳಲ್ಲಿ ಸಂಗ್ರಹವಾಗುತ್ತದೆ. ಆದರೆ, ಮಾರ್ಚ್​ 20ರಿಂದ ಇಲ್ಲಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಮೇ 3ರ ನಂತರ ಲಾಕ್​ಡೌನ್​ ತೆರವಾದರೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತಿರುಪತಿ ತಿರುಮಲ ದೇವಸ್ವಂ ಮಂಡಳಿ (ಟಿಟಿಡಿ) ನಿರ್ಧರಿಸಿತ್ತು. ಆದರೆ, ಇದೀಗ ಮತ್ತೆ ಎರಡು ವಾರಗಳ ಕಾಲ ದೇಶಾದ್ಯಂತ ಲಾಕ್​ಡೌನ್​ ವಿಸ್ತರಿಸಲಾದ ಕಾರಣ, ಮತ್ತೆ ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯುವಂತಾಗಿದೆ.

ಈ ನಡುವೆ ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ 1,300 ಕಾರ್ಮಿಕರಿಗೆ ಟಿಟಿಡಿ ಶಾಕ್​ ನೀಡಿದೆ. ಮೇ 1ರಿಂದ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿ ಮನೆಗೆ ಕಳುಹಿಸಿದೆ.

ಕಳೆದ ಒಂದು ತಿಂಗಳಿಗಿಂತಲೂ ಅಧಿಕ ಸಮಯದಲ್ಲಿ ತಿರುಪತಿ-ತಿರುಮಲಕ್ಕೆ ಭಕ್ತರ ಭೇಟಿ ಸ್ಥಗಿತಗೊಂಡಿದೆ. ಹೀಗಾಗಿ ಸ್ವಚ್ಛತಾ ಕೆಲಸಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದ್ದ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದೆ. ಇದಲ್ಲದೇ, ಕಾರ್ಮಿಕರ ನೇಮಕಕ್ಕೆ ಹೊರಗುತ್ತಿಗೆ ನೀಡಲಾಗಿದ್ದ ಸಂಸ್ಥೆಯೊಂದಿಗಿನ ಒಪ್ಪಂದವು ಏಪ್ರಿಲ್​ 30ಕ್ಕೆ ಕೊನೆಗೊಂಡಿದೆ. ಅದನ್ನು ಮುಂದುವರಿಸಲಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ಲಾಕ್​ಡೌನ್​ ಸಮಯದಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವಂತಿಲ್ಲ ಎಂದು ಸರ್ಕಾರವೇ ನಿರ್ದೇಶನ ನೀಡಿದೆ ಅಂಥದ್ದರಲ್ಲಿ ಸ್ವತಃ ಟಿಟಿಡಿಯೇ ಕಾರ್ಮಿಕರನ್ನು ಕೆಲಸದಿಂದ ತೆಗೆದು, ನಿರ್ದೇಶನವನ್ನು ಪಾಲಿಸದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಈ ವಿಷಯ ಗಮನಕ್ಕೆ ಬಂದಿದ್ದು, ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.

ಪ್ರಸ್ತುತ ದೇಗುಲಗಳಲ್ಲಿ ನಿತ್ಯ ಪೂಜಾವಿಧಿಗಳಷ್ಟೇ ನಡೆಯುತ್ತಿವೆ. ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿದ ದಿನದಿಂದ ದೇಗುಲದ ಕಾಯಂ ಉದ್ಯೋಗಿಗಳಿಗೂ ಕೆಲಸವಿಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.

ಆದರೂ, 3,309 ಕೋಟಿ ರೂ.ಗಳ ಬಜೆಟ್​ ಮಂಡಿಸುವ ಟಿಟಿಡಿ ಆರ್ಥಿಕ ಮಿತವ್ಯಯದ ಬಗ್ಗೆ ಯೋಚಿಸಬೇಕೇ? ಎಂಬ ಚರ್ಚೆಗಳು ಜೋರಾಗಿ ನಡೆದಿವೆ. ಟಿಟಿಡಿ ಕ್ರಮಕ್ಕೆ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.