More

    ದುಬೈನಲ್ಲಿ ಸಾವಿರಾರು ಕೋಟಿಯ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯನದ್ದು ಸಹಜ ಸಾವಲ್ಲ..! ವಾರಗಳೇ ಕಳೆದರೂ ಮೃತದೇಹ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲವೇಕೇ?

    ದುಬೈ: ಸಾಧಾರಣ ರೈತ ಕುಟುಂಬದ ಹಿನ್ನೆಲೆಯ ಯುವಕನೊಬ್ಬ ಪಾರ್ಟ್ ಟೈಮ್ ಜಾಬ್ ಮಾಡಿಕೊಂಡೇ ವ್ಯಾಸಂಗವನ್ನು ಪೂರೈಸಿದ್ದ. ಅದಾಗುತ್ತಿದ್ದಂತೆ ಓರಗೆಯವರ, ಊರಿನವರ ಹಾದಿಯನ್ನೇ ಹಿಡಿದು ಉದ್ಯೋಗ ಕೈಗೊಂಡು ಜೀವನದಲ್ಲಿ ಸೆಟ್ಲ್ ಆಗಬೇಕು ಎಂದುಕೊಂಡು ಕೊಲ್ಲಿ ರಾಷ್ಟ್ರದತ್ತ ಮುಖ ಮಾಡಿದ. ಅಲ್ಲಿ ಅಕೌಟೆಂಟ್ ಆಗಿ ವೃತ್ತಿ ಆರಂಭಿಸಿದ.

    ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಲ್ಲಿ ಒಬ್ಬನಾಗದೇ, ಅವರೆಲ್ಲರಿಗೂ ಮಾದರಿಯಾದ. ನೋಡನೋಡುತ್ತಿದ್ದಂತೆ ಸಾವಿರಾರು ಕೋಟಿ ರೂ. ಮೌಲ್ಯದ ತೈಲ ಸಾಮ್ರಾಜ್ಯವನ್ನೇ ನಿರ್ಮಿಸಿದ. ದಕ್ಷಿಣ ಭಾರತದಿಂದ ತೆರಳಿದ್ದ ಸಾವಿರಾರು ಕುಟುಂಬಗಳಿಗೆ ಆಧಾರವಾದ. ಈ ಧೀಮಂತನೇ ಜಾಯ್ ಅರಕ್ಕಲ್.

    ದುಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ನೋವಾ ರಿಫೈನರಿ ಹಾಗೂ ಟ್ರೇಡಿಂಗ್ ಕಂಪನಿ ಸಂಸ್ಥಾಪಕ ಜಾಯ್ ಅರಕ್ಕಲ್. ಅಬುದಾಬಿ, ದುಬೈ, ಶಾರ್ಜಾ, ಯುಎಇಗಳಲ್ಲಿ ರಿಫೈನರಿಗಳನ್ನು ಸ್ಥಾಪಿಸಿದ. ಇದಷ್ಟೇ ಅಲ್ಲ, ತೈಲ ಪೂರೈಕೆ, ಸಾಗಾಟಕ್ಕೆ ಬೃಹತ್ ಕಾರ್ಗೋ ವ್ಯವಸ್ಥೆಯನ್ನು ಜಾಯ್ ಕಂಪನಿ ಹೊಂದಿದೆ. ಹಡಗು, ಆಟೋಮೊಬೈಲ್, ಕೈಗಾರಿಕೆಗಳಿಗೆ ಲೂಬ್ರಿಕೆಂಟ್‍ಗಳನ್ನು ಸರಬರಾಜು ಮಾಡುತ್ತದೆ. ಇದೆಲ್ಲದರ ಮೂಲಕ ಸಾವಿರಾರು ಕೋಟಿ ರೂ.ಗಳ ವಹಿವಾಟು, ಆದಾಯ ಹೊಂದಿದೆ. ಇದಲ್ಲದೇ ಭಾರತದಲ್ಲೂ 10ಕ್ಕೂ ಅಧಿಕ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಜಾಯ್ ನಿರ್ದೇಶಕರಾಗಿದ್ದರು.

    ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿಯ ಸಮೀಪದ ಹಳ್ಳಿಯೊಂದರಲ್ಲಿ ಜನಿಸಿದ ಜಾಯ್ ಅರಕ್ಕಲ್, ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯುಳ್ಳವರು. ಕಲಿಕೆಗೂ ಅನುಕೂಲವಿಲ್ಲದಿದ್ದಾಗ ಪಾರ್ಟ್‍ಟೈಂ ಜಾಬ್ ಮಾಡಿಕೊಂಡು ಶಿಕ್ಷಣ ಎಂ.ಕಾಂ. ಹಾಗೂ ಸಿಎ ಇಂಟರ್​ಮಿಡಿಯೇಟ್​ ಮುಗಿಸಿದರು.

    ಕಳೆದ ಏಪ್ರಿಲ್ 23ರಂದು ದುಬೈನಲ್ಲಿ 53 ವರ್ಷದ ಜಾಯ್ ಮೃತಪಟ್ಟಿದ್ದರು. ಇವರ ಸಾವಿಗೆ ಹೃದಯಸ್ತಂಭನ ಕಾರಣವೆಂದು ಹೇಳಲಾಗಿತ್ತು. ಆದರೆ, ದುಬೈ ಪೊಲೀಸರು ಹೇಳುತ್ತಿರುವುದೆನೆಂದರೆ, ಜಾಯ್ ಅರಕ್ಕಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುಬೈ ಬಿಜಿನೆಸ್ ಬೇ ನಲ್ಲಿರುವ ಕಟ್ಟಡದ 14ನೇ ಅಂತಸ್ತಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬುರ್ ದುಬೈ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಅಪರಾಧಿಕ ದುರುದ್ದೇಶ ಯಾವುದೂ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

    ಮೃತಪಟ್ಟು ಒಂದು ವಾರದ ಬಳಿಕ ಇವರ ಪಾರ್ಥೀವ ಶರೀರವನ್ನು ಕೇರಳಕ್ಕೆ ತರಲಾಗಿದೆ. ವಯನಾಡ್​ ಜಿಲ್ಲೆಯ ಮಾನಂದವಾಡಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ಕುಟುಂಬ ಸದಸ್ಯರು ಪೂರ್ಣಗೊಳಿಸಿದ್ದಾರೆ. ಈ ವಿಳಂಬಕ್ಕೆ ಪೊಲೀಸ್​ ತನಿಖೆಯೇ ಕಾರಣ ಎಂದು ಹೇಳಲಾಗುತ್ತಿದೆ. ಭಾರತೀಯ ರಾಯಭಾರಿ ಕಚೇರಿ ಅಗತ್ಯ ಪರವಾನಗಿಗಳನ್ನು ಕೂಡಲೇ ನೀಡಿದ್ದರೂ ದುಬೈ ಸರ್ಕಾರ ತನಿಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೆಚ್ಚು ಕಾಲಾವಕಾಶ ಪಡೆದುಕೊಂಡಿತ್ತು ಎಂದು ತಿಳಿದು ಬಂದಿದೆ.

    ಜಾಯ್‍ಗೆ ಪತ್ನಿ ಸೆಲೀನಾ, ಪುತ್ರ ಅರುಣ್, ಪುತ್ರಿ ಆಶ್ಲೇ ಇದ್ದರು. ಜಾಯ್ ಅರಕ್ಕಲ್ ಸಾವಿನಿಂದ ಅವರ ಕುಟುಂಬ ಮಾತ್ರ ಕಂಗಾಲಾಗಿಲ್ಲ. ದಕ್ಷಿಣ ಭಾರತದ ಸಾವಿರಾರು ಕುಟುಂಬಗಳು ಕೂಡ ದಿಕ್ಕೇ ತೋಚದಂತಾಗಿದೆ.

    ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts