ನ್ಯೂಸ್

ಸುನಾಮಿ ಎಂದರೇನು? ಹೇಗೆ ಸಂಭವಿಸುತ್ತೆ? ಭೂಕಂಪಕ್ಕೂ ಅದಕ್ಕೂ ಏನು ಸಂಬಂಧ? ಇಲ್ಲಿದೆ ಕಂಪ್ಲೀಟ್​ ಮಾಹಿತಿ...Tsunami Explained

Tsunami Explained : ರಷ್ಯಾದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಅಲ್ಲಿನ ಜನರಲ್ಲಿ ಭಯ ಶುರುವಾಗಿದೆ. ಭೂಕಂಪನದ ಬೆನ್ನಲ್ಲೇ ರಷ್ಯಾ ಮತ್ತು ಜಪಾನ್‌ಗೆ ಸುನಾಮಿ ಸಹ ಅಪ್ಪಳಿಸಿದೆ. ಇದರೊಂದಿಗೆ ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಈ ಸಮಯದಲ್ಲಿ ಸುನಾಮಿ ಎಂದರೇನು? ಭೂಕಂಪ ಮತ್ತು ಸುನಾಮಿಯ ನಡುವಿನ ಸಂಬಂಧವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.

ಸುನಾಮಿ ಎಂದರೇನು?

ಸುನಾಮಿ ಎಂದರೆ ಸಾಗರದಲ್ಲಿ ರೂಪುಗೊಳ್ಳುವ ದೊಡ್ಡ ಅಲೆಗಳ ಸರಣಿ. ಸುನಾಮಿಗಳು ಸಾಮಾನ್ಯವಾಗಿ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಸಾಗರ ತಳದಲ್ಲಿ ಸಂಭವಿಸುವ ಇತರ ಪ್ರಮುಖ ಬದಲಾವಣೆಗಳಿಂದ ಅಥವಾ ಪ್ರಚೋದನೆಗಳಿಂದ ಉಂಟಾಗುತ್ತವೆ. ಸುನಾಮಿಗಳು ಸಾಮಾನ್ಯ ಅಲೆಗಳಂತೆ ಅಲ್ಲ. ಅವು ದೊಡ್ಡ ಅಲೆಗಳ ಸರಣಿ. ಅವು ಬಹಳ ದೂರದವರೆಗೆ ಪ್ರಯಾಣಿಸುತ್ತವೆ. ಈ ದೊಡ್ಡ ಅಲೆಗಳು ಒಂದರ ಹಿಂದಂತೆ ಒಂದಾಗಿ ಕರಾವಳಿ ಪ್ರದೇಶಗಳನ್ನು ಅಪ್ಪಳಿಸಿದಾಗ ಭಾರೀ ವಿನಾಶವನ್ನೇ ಉಂಟುಮಾಡುತ್ತವೆ. ಸಾಮಾನ್ಯ ಅಲೆಗಳು ಗಾಳಿಯಿಂದ ಉಂಟಾಗುತ್ತವೆ. ಆದರೆ, ಸುನಾಮಿ ಅಲೆಗಳು ಸಾಗರ ಆಳದಲ್ಲಿ ಉಂಟಾಗುವ ಪ್ರಚೋದನೆಯಿಂದ ಏಕಕಾಲದಲ್ಲಿ ದೊಡ್ಡ ಪ್ರಮಾಣದ ನೀರಿನೊಂದಿಗೆ ಮೇಲೇರುತ್ತವೆ. ಈ ಅಲೆಗಳು ಸಾಗರದ ಮೇಲೆ ಜೆಟ್ ವೇಗದಲ್ಲಿ ಚಲಿಸುತ್ತವೆ. ಕೆಲವೊಮ್ಮೆ ಅವು 30 ಮೀಟರ್‌ಗಳಿಗಿಂತ ಹೆಚ್ಚು ಎತ್ತರ ಇರಬಹುದು. ಸುನಾಮಿಗಳು ಹಲವಾರು ಕಿಲೋಮೀಟರ್ ಭೂಮಿಯನ್ನು ಸಹ ಭೇದಿಸಬಹುದು ಮತ್ತು ದೊಡ್ಡ ಕಟ್ಟಡಗಳನ್ನೇ ಸಹ ನಾಶಮಾಡಬಹುದು.

ಭೂಕಂಪ ಎಂದರೇನು? ಏಕೆ ಸಂಭವಿಸುತ್ತದೆ?

ಭೂಕಂಪ ಎಂದರೆ ಭೂಮಿಯ ಕೆಳಗಿರುವ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದ ಉಂಟಾಗುವ ಹಠಾತ್ ಭೂಮಿಯ ಅಲುಗಾಟ. ವಾಸ್ತವವಾಗಿ ನಮ್ಮ ಭೂಮಿಯು ನಾಲ್ಕು ಪದರಗಳಿಂದ ಮಾಡಲ್ಪಟ್ಟಿದೆ. ಅವುಗಳನ್ನು ಒಳಪದರ, ಹೊರ ಪದರ, ಮ್ಯಾಂಟಲ್​ (ಭೂಮಿಯ ಹೊದಿಕೆಯು ಭೂಮಿಯ ಒಳಭಾಗದ ಬಹುಪಾಲು ಘನ ಭಾಗವಾಗಿದೆ) ಮತ್ತು ಕ್ರಸ್ಟ್​ (ಗ್ರಹದ ಹೊರಗಿನ ಘನ ಭಾಗ) ಎಂದು ಕರೆಯಲಾಗುತ್ತದೆ. ಕ್ರಸ್ಟ್​​ ಮತ್ತು ಮ್ಯಾಂಟಲ್​ ಮೇಲ್ಭಾಗವನ್ನು ಲಿಥೋಸ್ಪಿಯರ್ (ಭೂಮಿಯ ಬಂಡೆಗಳು ಮತ್ತು ಖನಿಜಗಳ ಗಟ್ಟಿಯಾದ ಹೊರಗಿನ ಪದರವಾಗಿದೆ)​ ಎಂದು ಕರೆಯುತ್ತಾರೆ. ಇವು 50 ಕಿ.ಮೀ ದಪ್ಪ ಪದರವಾಗಿದ್ದು, ಇವುಗಳನ್ನು ಟೆಕ್ಟೋನಿಕ್​ ಪ್ಲೇಟ್ಸ್​ ಎಂದು ಕರೆಯಲಾಗುತ್ತದೆ. ಈ ಟೆಕ್ಟೋನಿಕ್​ ಪ್ಲೇಟ್ಸ್ ತಮ್ಮ ಸ್ಥಾನದಿಂದ​ ಸದಾ ಚಲಿಸುತ್ತಿರುತ್ತದೆ, ಸುತ್ತುತ್ತಿರುತ್ತದೆ ಮತ್ತು ಜಾರುತ್ತಿರುತ್ತದೆ.

ಈ ಪ್ಲೇಟ್​ಗಳು ಪ್ರತಿ ವರ್ಷ ತಮ್ಮ ಸ್ಥಾನದಿಂದ ಸುಮಾರು 4 ರಿಂದ 5 ಮಿಲಿ ಮೀಟರ್​ ಸ್ಥಳಾಂತರವಾಗುತ್ತದೆ. ಅಡ್ಡಲಾಗಿ ಮತ್ತು ಲಂಭವಾಗಿ ಚಲಿಸಬಲ್ಲದು. ಈ ಅನುಕ್ರಮದಲ್ಲಿ ಕೆಲವೊಮ್ಮೆ ಒಂದು ಪ್ಲೇಟ್ ಇನ್ನೊಂದು ಪ್ಲೇಟ್​ ಹತ್ತಿರ ಚಲಿಸುತ್ತದೆ ಮತ್ತು ಕೆಲವೊಮ್ಮೆ ಅದು ದೂರವೂ ಸಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಪ್ಲೇಟ್​ಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಾತ್ರ ಭೂಕಂಪ ಸಂಭವಿಸುತ್ತದೆ ಮತ್ತು ಭೂಮಿ ನಡುಗುತ್ತದೆ. ಈ ಪ್ಲೇಟ್​ಗಳು ಭೂ ಮೇಲ್ಮೈನಿಂದ ಸುಮಾರು 30 ರಿಂದ 50 ಕಿ.ಮೀ ಆಳದಲ್ಲಿರುತ್ತವೆ. ರಿಕ್ಟರ್ ಮಾಪಕ ಅಥವಾ ಕ್ಷಣ ಪರಿಮಾಣ ಮಾಪಕವು ಭೂಕಂಪದ ತೀವ್ರತೆಯನ್ನು ಅಳೆಯುತ್ತದೆ. ಭೂಕಂಪವು ಸಣ್ಣ ಕಂಪನಗಳಿಂದ ಹಿಡಿದು ನಗರಗಳು ನೆಲಸಮವಾಗುವ ಹಂತದವರೆಗೆ ಇರಬಹುದು. ಭೂಕಂಪ ಪ್ರಾರಂಭವಾಗುವ ಬಿಂದುವನ್ನು ಕೇಂದ್ರಬಿಂದು ಎಂದು ಕರೆಯಲಾಗುತ್ತದೆ. ಇದು ಭೂಕಂಪವು ಹುಟ್ಟುವ ಭೂಮಿಯ ಮೇಲ್ಮೈಯಲ್ಲಿರುವ ಬಿಂದುವಾಗಿದೆ.

ರಕ್ಷಣೆ ಮಾಡಿಕೊಳ್ಳುವುದು ಹೇಗೆ?

ಒಂದು ವೇಳೆ ದಿಢೀರ್​ ಭೂಕಂಪ ಸಂಭವಿಸಿದಾಗ ತಕ್ಷಣ ಮನೆಯಿಂದ ಹೊರಗೆ ಓಡಿ ಬರಬೇಕು. ಒಂದು ವೇಳೆ ನೀವು ಮನೆಯೊಳಗೆ ಸಿಲುಕಿದರೆ, ಹಾಸಿಗೆ ಅಥವಾ ಗಟ್ಟಿಮುಟ್ಟಾದ ಮೇಜಿನ ಕೆಳಗೆ ಮರೆಮಾಡಿಕೊಳ್ಳಬೇಕು. ಮನೆಯ ಮೂಲೆಗಳಲ್ಲಿ ನಿಂತುಕೊಳ್ಳುವ ಮೂಲಕ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಭೂಕಂಪನದ ಸಮಯದಲ್ಲಿ ಯಾವುದೇ ಕಾರಣಕ್ಕೂ ಲಿಫ್ಟ್​ ಬಳಸಲೇಬಾರದು. ತೆರೆದ ಪ್ರದೇಶಗಳಲ್ಲಿ ಹೋಗಬೇಕು. ಮರಗಳು ಮತ್ತು ವಿದ್ಯುತ್​ ಕಂಬಗಳು ಅಥವಾ ತಂತಿಗಳಿಂದ ದೂರ ನಿಲ್ಲಬೇಕು. ಇವುಗಳ ಹೊರತಾಗಿ ಭೂಕಂಪ ನಿರೋಧಕ ಮನೆಗಳು ಕೂಡ ಅಷ್ಟೇ ಮುಖ್ಯ. ಇದು ತುಂಬಾ ದುಬಾರಿ ಅಲ್ಲದಿದ್ದರೂ, ಅದರ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿಂದಾಗಿ, ಜನರು ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ.

ಭೂಕಂಪಕ್ಕೂ ಸುನಾಮಿಗೂ ಏನು ಸಂಬಂಧ?

ಹೆಚ್ಚಿನ ಸುನಾಮಿಗಳು ಸಮುದ್ರದ ಅಡಿಯಲ್ಲಿ ಸಂಭವಿಸುವ ಭೂಕಂಪಗಳಿಂದ ಉಂಟಾಗುತ್ತವೆ. ಅವು ಮುಖ್ಯವಾಗಿ ಸಬ್ಡಕ್ಷನ್ ವಲಯಗಳಲ್ಲಿ ಸಂಭವಿಸುತ್ತವೆ. ಅಲ್ಲಿ ಒಂದು ಪ್ಲೇಟ್ ಇನ್ನೊಂದು ಪ್ಲೇಟ್​ ಕೆಳಗೆ ಜಾರುತ್ತದೆ. ಈ ಪ್ಲೇಟ್‌ಗಳು ಇದ್ದಕ್ಕಿದ್ದಂತೆ ಚಲಿಸಿದಾಗ, ನೀರು ಲಂಬವಾಗಿ ಮೇಲಕ್ಕೆ ಧಾವಿಸುತ್ತದೆ. ಇದು ಸುನಾಮಿ ಅಲೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಸುನಾಮಿ ವಾರ್ನಿಂಗ್​ ಸಿಸ್ಟಮ್​ಗಳು ಸಾಗರ ಭೂಕಂಪಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತವೆ. ಸಾಮಾನ್ಯವಾಗಿ, 7.0 ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿದಲ್ಲಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಪ್ರತಿಯೊಂದು ಸಾಗರ ಭೂಕಂಪವು ಸುನಾಮಿಗೆ ಕಾರಣವಾಗುವುದಿಲ್ಲ. ಲಂಬವಾಗಿ ಚಲಿಸುವ ಮತ್ತು ಆಳವಿಲ್ಲದ ಆಳದಲ್ಲಿ ಸಂಭವಿಸುವ ಭೂಕಂಪಗಳು ಮಾತ್ರ ಸುನಾಮಿಗೆ ಕಾರಣವಾಗಬಹುದು.

ರಷ್ಯಾದಲ್ಲಿ ಪ್ರಬಲ ಭೂಕಂಪ, ಅಪ್ಪಳಿಸಿದ ಸುನಾಮಿ

ಅಂದಹಾಗೆ, ರಷ್ಯಾದ ಫಾರ್​ ಈಸ್ಟರ್ನ್​ನಲ್ಲಿ ಬುಧವಾರ (ಜುಲೈ 30) ಮುಂಜಾನೆ 8.8 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಉತ್ತರ ಪೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಎದ್ದಿದೆ. ವಿಶ್ವದ ಪ್ರಬಲ ಭೂಕಂಪಗಳಲ್ಲಿ ಇದು ಕೂಡ ಒಂದಾಗಿದ್ದು, ಈಗಾಗಲೇ ರಷ್ಯಾ ಮತ್ತು ಜಪಾನ್​ಗೆ ಸುನಾಮಿ ಬಂದಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಅಲಾಸ್ಕಾ, ಹವಾಯಿ ಮತ್ತು ನ್ಯೂಜಿಲೆಂಡ್ ಕಡೆಗೆ ದಕ್ಷಿಣಕ್ಕೆ ಇರುವ ಇತರ ಕರಾವಳಿಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 1,80,000 ಜನಸಂಖ್ಯೆಯನ್ನು ಹೊಂದಿರುವ ರಷ್ಯಾದ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 119 ಕಿಲೋಮೀಟರ್ (74 ಮೈಲುಗಳು) ದೂರದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. 6.9 ತೀವ್ರತೆಯಷ್ಟು ಬಲವಾದ ಕಂಪನಗಳು ದಾಖಲಾಗಿವೆ. ಅಲ್ಲದೆ, ಸರಣಿ ಕಂಪನಗಳ ವರದಿಯು ಕೂಡ ಆಗಿದೆ. ಭೂಕಂಪದಿಂದಾಗಿ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿ ನಗರದಲ್ಲಿ ಕಟ್ಟಡಗಳು ಮತ್ತು ಕಾರುಗಳು ರಸ್ತೆಗಳಲ್ಲಿ ತೂಗಾಡಿದ್ದು, ವಿದ್ಯುತ್ ಕಡಿತ ಮತ್ತು ಮೊಬೈಲ್ ಫೋನ್ ಸೇವೆಯಲ್ಲಿ ಅಡಚಣೆಗಳು ಕಂಡುಬಂದಿವೆ. ಭೂಕಂಪದ ನಂತರ ಕಮ್ಚಾಟ್ಕಾದಲ್ಲಿ ಹಲವಾರು ಜನರು ವೈದ್ಯಕೀಯ ನೆರವನ್ನು ಕೋರಿದ್ದಾರೆ. ಆದರೆ, ಈವರೆಗೆ ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ ಎಂದು ಪ್ರಾದೇಶಿಕ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. (ಏಜೆನ್ಸೀಸ್​)