ನ್ಯೂಯಾರ್ಕ್: ಕರೊನಾ ಸಂಕಷ್ಟದ ಆರಂಭದಿಂದಲೂ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಹರಿಹಾಯುತ್ತಿರುವ ಅಮೆರಿಕ, ಈಗ ಸದಸ್ಯತ್ವ ವಿಚಾರವನ್ನು ಮರುಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ಟೆಡ್ರಸ್ ಅಡಾನಾಮ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲ್ಕು ಪುಟಗಳ ಖಾರವಾದ ಪತ್ರ ಬರೆದಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಆರಂಭದಲ್ಲಿಯೇ ಸ್ಪಂದಿಸದ ಕ್ರಮ ತಿದ್ದುಕೊಳ್ಳದಿದ್ದರೆ ಹಾಗೂ ಚೀನಾ ಅಣತಿಯಂತೆ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸದಿದ್ದರೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಹೊರನಡೆಯುವುದಾಗಿ ಎಚ್ಚರಿಸಿದ್ದಾರೆ.
ಕರೊನಾಗೆ ಸಂಬಂಧಿಸಿದಂತೆ ಆರಂಭದಿಂದಲೇ ವಿಶ್ವ ಆರೋಗ್ಯ ಸಂಸ್ಥೆ ತಪ್ಪು ಹೆಜ್ಜೆಗಳನ್ನಿಟ್ಟ ಪರಿಣಾಮ ಪ್ರಸ್ತುತ ಇಡೀ ಜಗತ್ತೇ ಭಾರಿ ಬೆಲೆ ತೆರುತ್ತಿದೆ ಎಂಬುದು ಸ್ಪಷ್ಟವಾಗಿದೆ. ಚೀನಾ ಪ್ರಭಾವದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದೊಂದೇ ಇದಕ್ಕೆ ಪರಿಹಾರವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ಡಿಸೆಂಬರ್ನಿಂದಲೂ ಕರೊನಾ ಸಂಕಷ್ಟದ ಬಗ್ಗೆ ಲಭ್ಯ ಮಾಹಿತಿಗಳ ಪ್ರಕಾರ ಆರೋಗ್ಯ ಸಂಸ್ಥೆ ಕೆಲಸ ಮಾಡಿಲ್ಲ, ದಾರಿತಪ್ಪಿಸುವ ಅಂಕಿ-ಅಂಶಗಳನ್ನು ನೀಡಿದೆ. ಜಗತ್ತಿಗೆ ಕೆಟ್ಟ ಸಲಹೆ ನೀಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
30 ದಿನಗಳೊಳಗಾಗಿ ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ಅಮೆರಿಕ ತಾತ್ಕಾಲಿಕವಾಗಿ ತಡೆಹಿಡಿದಿರುವ ವಿಶ್ವಸಂಸ್ಥೆಗೆ ನೀಡಬೇಕಿರುವ ಅನುದಾನವನ್ನು ಶಾಶ್ವತವಾಗಿ ತಡೆ ಹಿಡಿಯಲಾಗುತ್ತದೆ ಹಾಗೂ ಸದಸ್ಯತ್ವ ಮುಂದುವರಿಸುವ ಬಗ್ಗೆ ಮರು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯ ವಿಶ್ವ ಆರೋಗ್ಯ ಸಂಸ್ಥೆಯ ಮಹತ್ವದ ಸಮಾವೇಶ ನಡೆಯುತ್ತಿದೆ. ಕರೊನಾ ವೈರಸ್ನ ಮೂಲ ಶೋಧಿಸಬೇಕೆಂಬ 123 ರಾಷ್ಟ್ರಗಳ ಪ್ರಸ್ತಾವನೆಗೆ ಚೀನಾ ವಿರೋಧಿಸಿದೆ. ಇದಾದ ಕೆಲ ಗಂಟೆಗಳಲ್ಲೇ ಟ್ರಂಪ್ ಈ ಪತ್ರ ಬರೆದಿದ್ದಾರೆ.