ನ್ಯೂಸ್

FBI ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನೇಮಕ; ಶ್ವೇತಭವನದಿಂದ ಬಾಲಿವುಡ್​​ ಸ್ಟೈಲ್​ನಲ್ಲಿ ವಿಶ್​​

ವಾಷಿಂಗ್ಟನ್​​ಡಿಸಿ: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ-FBI)ನ ಹೊಸ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿಯನ್ನು ಅಮೆರಿಕ ಸೆನೆಟ್ 51–49 ಮತಗಳಿಂದ ಅನುಮೋದಿಸಿತು. ಕಾಶ್ ಪಟೇಲ್ ಅವರನ್ನು ಟ್ರಂಪ್ ಅವರ ಕಟ್ಟಾ ಬೆಂಬಲಿಗರೆಂದು ಪರಿಗಣಿಸಲಾಗಿದೆ. ಕಶ್ಯಪ್ ಪ್ರಮೋದ್ ವಿನೋದ್ ಪಟೇಲ್ ಅವರನ್ನು ’ಕಾಶ್ ಪಟೇಲ್’ ಎಂದು ಕರೆಯಲಾಗುತ್ತದೆ.

ಕಾಶ್​ ಪಟೇಲ್​ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಸಹಾಯಕ ಮತ್ತು ಶ್ವೇತಭವನದ ಉಪಮುಖ್ಯಸ್ಥ ಡಾನ್ ಸ್ಕ್ಯಾವಿನೊ ಅವರು ವಿಶಿಷ್ಟ ರೀತಿಯಲ್ಲಿ ಅಭಿನಂದಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಲದ್ಲಿ ವೈರಲ್​ ಆಗುತ್ತಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಬಾಜಿರಾವ್ ಮಸ್ತಾನಿ ಚಿತ್ರದ 'ಮಲ್ಹಾರಿ' ಹಾಡಿನ ನೃತ್ಯ ತುಣುಕನ್ನು ಸ್ಕ್ಯಾವಿನೋ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ವಿಡಿಯೋವನ್ನು ಎಡಿಟ್​ ಮಾಡಲಾಗಿದ್ದು, ರಣವೀರ್ ಅವರ ಮುಖವನ್ನು ಪಟೇಲ್ ಮುಖಕ್ಕೆ ಬದಲಾಯಿಸಲಾಗಿದೆ. ಇದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ.

ಡ್ಯಾನ್ ಸ್ಕ್ಯಾವಿನೊ ಈ ವಿಡಿಯೋವನ್ನು ಹಂಚಿಕೊಂಡಿದ್ದು 'ಹೊಸ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್‌ಗೆ ಅಭಿನಂದನೆಗಳು' ಎಂದು ಬರೆದಿದ್ದಾರೆ. ವೈರಲ್​ ಆದ 47 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೂ 3.5 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಕಾಮೆಂಟ್​ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ಕಾಶ್ ಪಟೇಲ್ ಅವರನ್ನು ಎಫ್‌ಬಿಐ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದರು. ಈ ಹಿಂದೆ ಕ್ರಿಸ್ಟೋಫರ್ ರೇ ಈ ಹುದ್ದೆಯನ್ನು ಅಲಂಕರಿಸಿದ್ದರು. ಎಫ್‌ಬಿಐ ನಿರ್ದೇಶಕರಾಗಿ ನೇಮಕಗೊಂಡ ನಂತರ ಕಾಶ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ಒಂಬತ್ತನೇ ನಿರ್ದೇಶಕರಾಗಿ ದೃಢೀಕರಿಸಲ್ಪಟ್ಟಿರುವುದು ನನಗೆ ಗೌರವ ತಂದಿದೆ ಎಂದು ಹೇಳಿದ್ದಾರೆ. 1980 ಫೆಬ್ರವರಿ 25ರಂದು ನ್ಯೂಯಾರ್ಕ್‌ನ ಗಾರ್ಡನ್ ಸಿಟಿಗೆ ವಲಸೆ ಹೋದ ಭಾರತೀಯ ಗುಜರಾತಿ ದಂಪತಿ ಮಗ ಕಶ್ಯಪ್​ ಪ್ರಮೋದ್​​ ವಿನೋದ್​ ಪಟೇಲ್​​.(ಏಜೆನ್ಸೀಸ್​​)