Iran vs Israel: ಇಸ್ರೇಲ್ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ. ಕದನ ವಿರಾಮದ ನಡುವೆಯೂ ಇರಾನ್ ದಾಳಿ ಮಾಡಿದೆ ಎಂದು ಸಿಡಿದೆದ್ದ ಇಸ್ರೇಲ್, ಪ್ರತೀಕಾರದ ನೆಪದಲ್ಲಿ ಮತ್ತೇ ಕ್ಷಿಪಣಿ ದಾಳಿಗೆ ದಿಟ್ಟ ನಿರ್ಧಾರ ಕೈಗೊಂಡಿತು. ಈ ಬೆಳವಣಿಗೆ ಕಂಡ ಕೂಡಲೇ ಇಸ್ರೇಲ್‌ಗೆ ಎಚ್ಚರಿಕೆ ರವಾನಿಸಿರುವ ಟ್ರಂಪ್, ಇರಾನ್ ಮೇಲೆ ಬಾಂಬ್ಗಳ ದಾಲಿಯನ್ನು ನಿಲ್ಲಿಸಿ ಎಂದಿದ್ದಾರೆ.
ಇದನ್ನೂ ಓದಿ: 300 ವರ್ಷಗಳ ಹಳೆಯ ಚಿತ್ರಕಲೆಗೆ ಸೆಲ್ಫಿ ಕಾಟ! ಸ್ವಂತೀ ಹಾವಳಿಗೆ ಬ್ರೇಕ್ ಹಾಕಲು ಇಟಲಿ ಮ್ಯೂಸಿಯಂ ಸಜ್ಜು | Italian Museum
"ಯಾವುದೇ ಕಾರಣಕ್ಕೂ ಇರಾನ್ ಮೇಲೆ ಪ್ರತಿದಾಳಿಯಾಗಿ ಬಾಂಬರ್ ಬಳಸಬೇಡಿ" ಎಂದು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, "ಈ ನಡೆ ದೊಡ್ಡ ಉಲ್ಲಂಘನೆ. ಕೈಗೊಂಡಿರುವ ಯೋಜನೆಗಳನ್ನು ಈ ಕೂಡಲೇ ಇಸ್ರೇಲ್ ನಿಲ್ಲಿಸಬೇಕು. ನಿಮ್ಮ ಪೈಲಟ್ಗಳನ್ನು ವಾಪಾಸ್ ಕರೆತನ್ನಿ" ಎಂದು ಇಸ್ರೇಲ್‌ಗೆ ಎಚ್ಚರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಟ್ರಂಪ್ ದೂರವಾಣಿ ಕರೆಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ.
ಇಂದು ಬೆಳಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದರು. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ನಲ್ಲಿ ಬರೆದುಕೊಂಡ ಟ್ರಂಪ್, "ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ನಡೆಯಲಿದೆ. ಕದನ ವಿರಾಮಕ್ಕೆ ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಂಡಿವೆ. 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಪ್ರತಿಯೊಂದು ಕದನ ವಿರಾಮದ ಸಮಯದಲ್ಲಿ, ಇನ್ನೊಂದು ಕಡೆಯವರು ಶಾಂತಿಯುತ ಮತ್ತು ಗೌರವಯುತವಾಗಿರುತ್ತಾರೆಂದು" ಟ್ರಂಪ್ ಒತ್ತಿ ಹೇಳಿದರು. ಅಲ್ಲದೇ, ಎರಡೂ ದೇಶಗಳನ್ನು ಟ್ರಂಪ್ ಅಭಿನಂದಿಸಿದರು.
ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಇಸ್ರೇಲ್ ಮತ್ತು ಇರಾನ್ ತೋರಿದ ಸಹಿಷ್ಣುತೆ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಅಮೆರಿಕ ಅಧ್ಯಕ್ಷರು ಶ್ಲಾಘಿಸಿದರು. ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ, ಅದು ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಟ್ರಂಪ್ ಅವರ ಕದನ ವಿರಾಮದ ಹಕ್ಕುಗಳಿಗೆ ಇಸ್ರೇಲ್ ಆಗಿನ್ನೂ ಪ್ರತಿಕ್ರಿಯಿಸಿರಲಿಲ್ಲ. ಅಂತಿಮವಾಗಿ ಇರಾನ್, ಕದನ ವಿರಾಮವನ್ನು ಖಚಿತಪಡಿಸಿದೆ,(ಏಜೆನ್ಸೀಸ್).