ನ್ಯೂಸ್

'ನಾನು ಆರೋಗ್ಯವಾಗಿದ್ದೇನೆ': ವಿಡಿಯೋ ಸಂದೇಶ ನೀಡಿದ ಡೊನಾಲ್ಡ್ ಟ್ರಂಪ್​ಗೆ ಆರೋಗ್ಯ ಅಗ್ನಿಪರೀಕ್ಷೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ವಾಷಿಂಗ್ಟನ್: ಕರೊನಾದಿಂದಾಗಿ ಆಸ್ಪತ್ರೆ ಸೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ ರಾತ್ರಿ ವಿಡಿಯೋ ಸಂದೇಶ ನೀಡಿದ್ದು, ‘ನಾನು ಆರೋಗ್ಯವಾಗಿದ್ದೇನೆ. ಆದರೆ ಮುಂದಿನ ಕೆಲ ದಿನಗಳು ನಿಜವಾದ ಪರೀಕ್ಷೆಯನ್ನು ಎದುರಿಸಲಿದ್ದೇನೆ’ ಎಂದಿದ್ದಾರೆ.

ಟ್ರಂಪ್​ಗೆ ಉಸಿರಾಟ ತೊಂದರೆ, ಜ್ವರ, ಕೆಮ್ಮು ಸೇರಿ ಕೆಲ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ವಾಷಿಂಗ್ಟನ್​ನ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಶನಿವಾರ ರಾತ್ರಿ ವೈದ್ಯರು ಹೇಳಿದ್ದರು. ಇದರ ಬೆನ್ನಲ್ಲೇ ವಿಡಿಯೋ ಮೂಲಕ ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ವಿಡಿಯೋ 48 ಗಂಟೆಗಳ ಎಚ್ಚರಿಕೆ ನೀಡುವುದಕ್ಕೆ ಮೊದಲು ಚಿತ್ರೀಕರಿಸಿದ್ದೋ ಅಥವಾ ನಂತರ ಚಿತ್ರೀಕರಿಸಿರುವುದೋ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಟ್ರಂಪ್ ಆರೋಗ್ಯದ ಕುರಿತಾಗಿ ಶ್ವೇತಭವನ ಧನಾತ್ಮಕ ವರದಿ ನೀಡಿದೆ. ಟ್ರಂಪ್​ಗೆ ಕಳೆದ 24 ಗಂಟೆಗಳಿಂದ ಜ್ವರ ಕಾಣಿಸಿಕೊಂಡಿಲ್ಲ. ಕೆಮ್ಮು ಕಡಿಮೆಯಾಗಿದೆ. ಉಸಿರಾಟದ ತೊಂದರೆಯೂ ಕಡಿಮೆಯಾಗಿದೆ ಎಂದು ಶ್ವೇತ ಭವನದ ವೈದ್ಯ ಸೀನ್ ಕಾನ್ಲೆ ತಿಳಿಸಿದ್ದಾರೆ. ಆದರೆ ಅವರು ಅಪಾಯದಿಂದ ಸಂಪೂರ್ಣವಾಗಿ ಬಚಾವಾಗಿಲ್ಲ ಎಂದೂ ತಿಳಿಸಲಾಗಿದೆ. ಟ್ರಂಪ್ ಆಸ್ಪತ್ರೆಯಿಂದಲೇ ಕೆಲಸ ಮಾಡುತ್ತಿರುವ ಫೋಟೋಗಳನ್ನು ಶ್ವೇತಭವನ ಮತ್ತು ಟ್ರಂಪ್ ಅವರ ಪುತ್ರಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಅಧ್ಯಕ್ಷೀಯ ಸ್ಪರ್ಧಿ ನಿಧನರಾದರೆ? ಅಮೆರಿಕದ ಸಂವಿಧಾನದ ಪ್ರಕಾರ, ಒಂದು ವೇಳೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ನಿಧನರಾದರೆ ಪಕ್ಷವು ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.

ನೈಜ ಸ್ಥಿತಿ ಮುಚ್ಚಿಡಲಾಗುತ್ತಿದೆಯೇ? ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರು. ಈ ಹಿಂದೆ ಆಡಳಿತ ನಡೆಸಿದ ಅನೇಕ ಅಧ್ಯಕ್ಷರು ಅನಾರೋಗ್ಯಕ್ಕೆ ತುತ್ತಾದರೂ ಅದನ್ನು ಸಾರ್ವಜನಿಕರಿಗೆ ತಿಳಿಯದಂತೆ ಮುಚ್ಚಿಡಲಾಗುತ್ತಿತ್ತು. 1919ರ ಸಮಯಕ್ಕೆ ಅಧ್ಯಕ್ಷರಾಗಿದ್ದ ವುಡ್ರೊ ವಿಲ್ಸನ್ ಅವರು ಸಂಕ್ರಾಮಿಕ ಕಾಯಿಲೆಯೊಂದಕ್ಕೆ ತುತ್ತಾಗಿದ್ದರು. ಸುಮಾರು 6.75 ಲಕ್ಷ ಅಮೆರಿಕನ್ನರನ್ನು ಬಲಿ ತೆಗೆದುಕೊಂಡ ಸ್ಪಾನಿಷ್ ಫ್ಲೂಗೆ ಒಳಗಾಗಿದ್ದರು. ಆ ವಿಚಾರವನ್ನು ಸಾರ್ವಜನಿಕಗೊಳಿಸಿರಲಿಲ್ಲ. ಟ್ರಂಪ್ ವಿಚಾರದಲ್ಲೂ ಇದೇ ರೀತಿ ಆಗಿರಬಹುದು ಎನ್ನಲಾಗಿದೆ. ಟ್ರಂಪ್​ಗೆ ಕೆಲ ದಿನಗಳ ಹಿಂದೆಯೇ ಸೋಂಕು ದೃಢವಾಗಿದ್ದು, ರೋಗ ಲಕ್ಷಣ ಕಾಣಿಸಿಕೊಳ್ಳುವ ತನಕ ಅದನ್ನು ಮುಚ್ಚಿಟ್ಟಿದ್ದಾರೆ ಎನ್ನುವ ಊಹಾಪೋಹಗಳು ಹುಟ್ಟಿಕೊಂಡಿವೆ. ಒಂದು ತಿಂಗಳಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಅಮೆರಿಕ ಅಂದಿನ ಅಧ್ಯಕ್ಷರಾಗಿದ್ದ ಗ್ರೋವರ್ ಕ್ಲೀವ್​ಲ್ಯಾಂಡ್ , ಲಿಂಡನ್ ಬಿ ಜಾನ್ಸನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಫ್ರಾಂಕ್ಲಿನ್ ಡಿ ರೂಸ್ಟಲ್ಟ್ ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಈ ಎಲ್ಲ ವಿಚಾರಗಳನ್ನು ಶ್ವೇತಭವನ ರಹಸ್ಯವಾಗಿಯೇ ಇಟ್ಟಿತ್ತು.

ಚರ್ಚೆಗೆ ಬರುತ್ತಿರುವ ಹಲವು ಪ್ರಶ್ನೆಗಳು

ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳು ಇರುವಾಗಲೇ ಡೊನಾಲ್ಡ್ ಟ್ರಂಪ್ ಕರೊನಾಗೆ ತುತ್ತಾಗಿ ಆಸ್ಪತ್ರೆ ಸೇರಿರುವುದು ಹಲವು ಪ್ರಶ್ನೆಗಳನ್ನು ಮುಂಚೂಣಿಗೆ ತಂದಿದೆ. ಹಾಲಿ ಅಧ್ಯಕ್ಷರು ನಿಧನರಾದರೆ ಅಥವಾ ತೀವ್ರ ಅಸ್ವಸ್ಥರಾದರೆ, ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಲಾಗುತ್ತದೆ? ಆಡಳಿತವನ್ನು ಯಾರು ನಡೆಸುತ್ತಾರೆ? ಚುನಾವಣೆ ಹೇಗೆ ನಡೆಯಲಿದೆ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಈ ಬಗ್ಗೆ ಅಮೆರಿಕ ಸಂವಿಧಾನ ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ.

ಹಾಲಿ ಅಧ್ಯಕ್ಷರು ಮೃತರಾದರೆ?

ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಪ್ರಕಾರ, ಹಾಲಿ ಅಧ್ಯಕ್ಷರು ಮೃತರಾದರೆ ಉಪಾಧ್ಯಕ್ಷ ಸ್ಥಾನದಲ್ಲಿರುವವರು ಅಧ್ಯಕ್ಷೀಯ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಅಧ್ಯಕ್ಷರು ರಾಜೀನಾಮೆ ನೀಡಿದರೂ ಇದೇ ಕಾನೂನು ಅನ್ವಯವಾಗುತ್ತದೆ. ಅಮೆರಿಕದಲ್ಲಿ ಈ ಹಿಂದೆ ಎಂಟು ಬಾರಿ ಉಪಾಧ್ಯಕ್ಷರು ಇದೇ ಕಾರಣದಿಂದ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದರು. ಅಮೆರಿಕದಲ್ಲಿ 1945ರಲ್ಲಿ ರಾಷ್ಟ್ರಪತಿ ಉತ್ತರಾಧಿಕಾರಿ ಕಾಯ್ದೆಯನ್ನು ತರಲಾಗಿದೆ. ಅದರ ಪ್ರಕಾರ ಒಂದು ವೇಳೆ ಹಾಲಿ ಅಧ್ಯಕ್ಷರು ಮೃತರಾದರೆ, ಸದನದ ಸ್ಪೀಕರ್​ಗೆ ಅಧ್ಯಕ್ಷೀಯ ಸ್ಥಾನ ನೀಡಲಾಗುತ್ತದೆ. ಒಂದು ವೇಳೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಬ್ಬರೂ ಅಸಮರ್ಥರಾದರೆ ಏನು ಮಾಡಬೇಕು ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಕರ್ತವ್ಯ ನಿರ್ವಹಣೆಗೆ ಅಸಮರ್ಥರಾದರೆ?

ಒಂದು ವೇಳೆ ಅಧ್ಯಕ್ಷರು ಅನಾರೋಗ್ಯದಿಂದ ಆಡಳಿತ ನಡೆಸಲು ಅಸಮರ್ಥರಾದರೆ ಅವರ ಸ್ಥಾನವನ್ನು ಉಪಾಧ್ಯಕ್ಷರಿಗೆ ನೀಡುವ ಅಧಿಕಾರ ಅಧ್ಯಕ್ಷರಿಗೇ ಇರುತ್ತದೆ. ತಾನು ಅಸಮರ್ಥನಾಗಿರುವ ಕಾರಣ ಕಾರ್ಯಕಾರಿಯಾಗಿ ಉಪಾಧ್ಯಕ್ಷರು ಮುಂದುವರಿಯಲಿದ್ದಾರೆ ಎಂದು ಸಂಸತ್ತಿಗೆ ಲಿಖಿತವಾಗಿ ಬರೆದುಕೊಡಬೇಕು. ಅಧ್ಯಕ್ಷರು ಆರೋಗ್ಯವಾಗಿ ಮರಳಿದ ನಂತರ ತಮ್ಮ ಅಧಿಕಾರವನ್ನು ಮರಳಿ ಪಡೆಯಬಹುದು.

ಅಧ್ಯಕ್ಷರು ಅಧಿಕಾರ ಹಸ್ತಾಂತರಕ್ಕೆ ಒಪ್ಪದಿದ್ದರೆ?

ಒಂದು ವೇಳೆ ಹಾಲಿ ಅಧ್ಯಕ್ಷರು ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರ ಮಾಡುವುದಕ್ಕೂ ಅಸಮರ್ಥರಾದರೆ ಅಥವಾ ಮಾಡಲು ಒಪ್ಪದಿದ್ದರೆ, ಅಧ್ಯಕ್ಷರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವ ಕಾನೂನಿದೆ. ಉಪಾಧ್ಯಕ್ಷರು ಸದನದಲ್ಲಿ ಈ ಬಗ್ಗೆ ರ್ಚಚಿಸಬೇಕು. ಸದನದ ಬಹುಪಾಲು ಜನರು ಅಧ್ಯಕರು ಅಸಮರ್ಥರು ಎಂದು ಘೋಷಿಸಿದ ನಂತರ ಉಪಾಧ್ಯಕ್ಷರು ಅಧ್ಯಕ್ಷ ಸ್ಥಾನವನ್ನು ಪಡೆಯಬಹುದು.