ವಾಷಿಂಗ್ಟನ್: ನೋವೆಲ್ ಕರೊನಾ ವೈರಸ್ COVID19 ನ ಮೂಲ ಯಾವುದು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿರ್ಣಯ ಕೈಗೊಳ್ಳುವಲ್ಲಿ ತೋರಿದ ಬಿಕ್ಕಟ್ಟಿನ ಕುರಿತು ತನಿಖೆ ಆಗಬೇಕು ಎಂದು ಪ್ರಭಾವಿ ಸೆನೆಟರ್ಗಳ ಗುಂಪು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದೆ. ಅಲ್ಲದೆ, ಈ ಸಂಬಂಧ ಅಮೆರಿಕದ ಮಿತ್ರರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳ ಜತೆಗೆ ಕೆಲಸ ಶುರುಮಾಡಬೇಕು ಎಂದು ಒತ್ತಡ ಹೇರಿದ್ದಾರೆ.
ಫ್ಲೋರಿಡಾದ ರಿಪಬ್ಲಿಕನ್ ಸೆನೆಟರ್ ಮ್ಯಾಕ್ರೋ ರುಬಿಯೋ ನೇತೃತ್ವದ ಈ ತಂಡದಲ್ಲಿ ಸೆನೆಟರ್ಗಳಾದ ಮಾರ್ಷಾ ಬ್ಲ್ಯಾಕ್ಬರ್ನ್, ಥೋಮ್ ಟಿಲಿಸ್, ಜಾನ್ ಕೋರ್ನಿನ್, ರೋಜರ್ ವಿಕರ್, ಟೆಡ್ ಕ್ರೂಝ್, ಡ್ಯಾನ್ ಸುಲ್ಲಿವಾನ್ ಮತ್ತು ಮೈಕ್ ಲೀ ಇದ್ದು, COVID19 ರೆಸ್ಪಾನ್ಸ್ ಮತ್ತು ಅದಕ್ಕೆ ಸಂಬಂಧಿತ ವಿಚಾರಗಳ ತನಿಖೆಗಾಗಿ ಉನ್ನತ ಮಟ್ಟದ ನಿಯೋಗಕ್ಕೆ ನಾಯಕನನ್ನು ನೇಮಿಸುವಂತೆಯೂ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ.
ತನಿಖೆಗೊಳಪಡಬೇಕಾದ ಅಂಶಗಳೇನು?: ಚೀನಾದ ವುಹಾನ್ನಲ್ಲಿ ಬಯಲಾದ COVID19 ನೋವೆಲ್ ಕರೊನಾ ವೈರಸ್ ಎಲ್ಲಿಂದ ಹೊರಬಿತ್ತು ಎಂಬ ಅಂಶದಿಂದ ಹಿಡಿದು ಅದನ್ನು ಮುಚ್ಚಲು ಚೀನೀಸ್ ಕಮ್ಯೂನಿಸ್ಟ್ ಪಾರ್ಟಿ ಏನೇನು ಕಸರತ್ತು ಮಾಡಿದೆ ಎಂಬ ಅಂಶವೂ ಸೇರಿ ಎಲ್ಲ ರೀತಿಯಲ್ಲೂ ತನಿಖೆ ಆಗಬೇಕು ಎಂಬ ಆಗ್ರಹವನ್ನು ಸೆನೆಟರ್ಗಳು ಮಾಡಿದ್ದಾರೆ.
ಒಮ್ಮೆ ಈ ಸೋಂಕು ನಿಯಂತ್ರಣಕ್ಕೆ ಬಂದ ಕೂಡಲೇ ಅಂತಾರಾಷ್ಟ್ರೀಯ ಮಟ್ಟದ ತನಿಖೆ ಆಗಬೇಕು. ಚೀನಾ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೇಗೆ ಶೋಷಣೆಗೊಳಪಡಿಸುತ್ತಿದೆ ಎಂಬುದೂ ಜಗತ್ತಿಗೆ ಮನದಟ್ಟಾಗಬೇಕು. ಸೆಕ್ರೆಟರಿ ಮೈಕ್ ಪೊಂಪಿಯೋ ಮತ್ತು ಇತರೆ ಆಡಳಿತಾಧಿಕಾರಿಗಳು ಈ ವಿಚಾರವಾಗಿ ಕೆಲಸ ಮಾಡುವಂತೆ ನೀವು ನಿರ್ದೇಶನ ನೀಡಬೇಕು ಎಂದು ಟ್ರಂಪ್ಗೆ ಸೆನೆಟರ್ಗಳು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)