ನ್ಯೂಸ್

ಆಮದು ಮೇಲೆ ಶೇ.15ರಷ್ಟು ಸುಂಕ​; ಯುರೋಪಿಯನ್​ ಒಕ್ಕೂಟದ ಜತೆ ಟ್ರಂಪ್​ 'ಬಿಗ್​ ಡೀಲ್' | US-UE Tariffs

US-UE Tariffs: ಇತ್ತೀಚೆಗಷ್ಟೇ ಥೈಲ್ಯಾಂಡ್​ ಮತ್ತು ಕಾಂಬೋಡಿಯಾ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಮಾಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಯುರೋಪಿಯನ್ ಒಕ್ಕೂಟದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಅಧಿಕೃತವಾಗಿದೆ.

ಅಮೆರಿಕ ಈಗ ಯುರೋಪಿಯನ್ ಒಕ್ಕೂಟದ ಆಮದುಗಳ ಮೇಲೆ ಶೇ.15ರಷ್ಟು ಸುಂಕವನ್ನು ವಿಧಿಸಲಿದೆ ಎಂದು ಟ್ರಂಪ್​ ಹೇಳಿದ್ದಾರೆ. ಅಮೆರಿಕ ಇದನ್ನು ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದ ಎಂದು ಬಣ್ಣಿಸಿರುವುದು ಗಮನಾರ್ಹ. ಯುರೋಪಿಯನ್ ಸರಕುಗಳ ಮೇಲೆ ಶೇ.30ರಷ್ಟು ಯುಎಸ್ ಸುಂಕವನ್ನು ತಪ್ಪಿಸಲು ಆಗಸ್ಟ್ 1ರ ಗಡುವು ಸಮೀಪಿಸುತ್ತಿರುವ ಬೆನ್ನಲ್ಲೇ ಈ ಒಪ್ಪಂದ ಮುನ್ನೆಲೆಗೆ ಬಂದಿದೆ.

ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ನಡುವೆ ಸ್ಕಾಟ್ಲೆಂಡ್‌ನಲ್ಲಿ ನಡೆದ ಸಭೆಯಲ್ಲಿ ಈ ಒಪ್ಪಂದಕ್ಕೆ ಮುನ್ನುಡಿ ಬರೆಯಲಾಯಿತು. ಟ್ರಂಪ್ ಎಎಫ್‌ಪಿಗೆ ಇಯು ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು ಎರಡೂ ದೇಶಗಳಿಗೆ ವಿನ್​-ವಿನ್​ ಒಪ್ಪಂದವಾಗಿದೆ. ನಿರ್ಣಾಯಕ ಆಟೋಮೊಬೈಲ್ ವಲಯ, ಔಷಧ ಮತ್ತು ಅರೆವಾಹಕಗಳು ಸೇರಿದಂತೆ ಯುರೋಪಿನ ಎಲ್ಲಾ ವಲಯಗಳಿಗೆ ಶೇ.15ರಷ್ಟು ಸುಂಕಗಳು ಅನ್ವಯಿಸುತ್ತವೆ ಎಂದು ಟ್ರಂಪ್ ತಿಳಿಸಿದ್ದಾರೆ.

ಒಪ್ಪಂದದ ಪರಿಣಾಮವಾಗಿ 27 ರಾಷ್ಟ್ರಗಳ EU ಅಮೆರಿಕದಿಂದ 750 ಡಾಲರ್​ ಶತಕೋಟಿ ಮೌಲ್ಯದ ಇಂಧನವನ್ನು ಖರೀದಿಸುತ್ತದೆ ಮತ್ತು ಯುರೋಪಿಯನ್​ ಯೂನಿಯನ್​ (ಇಯು) 600 ಶತಕೋಟಿ ಹೆಚ್ಚುವರಿ ಹೂಡಿಕೆಯನ್ನು ಒದಗಿಸುತ್ತದೆ ಎಂದು ಟ್ರಂಪ್ ನುಡಿದಿದ್ದಾರೆ. ಇನ್ನು ರಷ್ಯಾದ ಇಂಧನದ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಯುರೋಪಿಯನ್ ಒಕ್ಕೂಟವು ಅಮೆರಿಕದಿಂದ ದ್ರವೀಕೃತ ನೈಸರ್ಗಿಕ ಅನಿಲ, ತೈಲ ಮತ್ತು ಪರಮಾಣು ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಿದೆ ಎಂದು ವಾನ್ ಡೆರ್ ಲೇಯೆನ್ ಹೇಳಿದ್ದಾರೆ.

ವಿಮಾನ, ಕೆಲವು ರಾಸಾಯನಿಕಗಳು, ಅನೇಕ ಕೃಷಿ ಸರಕುಗಳು ಮತ್ತು ಪ್ರಮುಖ ಕಚ್ಚಾ ವಸ್ತುಗಳಂತಹ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕಲು ಎರಡೂ ದೇಶಗಳು ಪರಸ್ಪರ ಒಪ್ಪಿಕೊಂಡಿವೆ ಎಂದು ಲೇಯೆನ್​ ಸ್ಪಷ್ಟಪಡಿಸಿದ್ದಾರೆ. ಜನವರಿಯಲ್ಲಿ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಇಯು ಭಾರೀ ಸುಂಕಗಳ ಹೊಡೆತಕ್ಕೆ ಸಿಲುಕಿತ್ತು. ಇದು ಕಾರುಗಳ ಮೇಲೆ ಶೇ.25ರಷ್ಟು ತೆರಿಗೆ ಮತ್ತು ಉಕ್ಕು ಹಾಗೂ ಅಲ್ಯೂಮಿನಿಯಂ ಮೇಲೆ ಶೇ.50ರಷ್ಟು ಸುಂಕವನ್ನು ಎದುರಿಸುವಂತೆ ಮಾಡಿತ್ತು. ಮುಂದಿನ ದಿನಗಳಲ್ಲಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ಶೇ.10ರಷ್ಟು ಸುಂಕ ದರವು 30 ಪ್ರತಿಶತಕ್ಕೆ ಏರಬಹುದು ಎಂದು ಯುಎಸ್​ ಎಚ್ಚರಿಸಿತ್ತು. ಅಂತೆಯೇ, ಈಗ ಎರಡೂ ದೇಶಗಳು ಬಿಗ್ ಡೀಲ್​ಗೆ ಕೈಜೋಡಿಸಿವೆ,(ಏಜೆನ್ಸೀಸ್).