ನ್ಯೂಸ್

ಡೊನಾಲ್ಡ್​ ಟ್ರಂಪ್ ತೆರಿಗೆ ಬಾಂಬ್​: ಭಾರತದಲ್ಲಿ ಇನ್ನಷ್ಟು ದುಬಾರಿ ಆಗಲಿದೆಯಾ ಹಳದಿ ಲೋಹ? Trump Tariffs

Trump Tariffs : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲೇ ಹೇಳಿದಂತೆ ಪ್ರತೀಕಾರದ ಸುಂಕಗಳ ಬಾಂಬ್ ಸಿಡಿಸಿದ್ದಾರೆ. ಪ್ರಪಂಚದಾದ್ಯಂತ ವಿವಿಧ ದೇಶಗಳಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಭಾರಿ ಸುಂಕಗಳನ್ನು ವಿಧಿಸಿದ್ದಾರೆ. ಟ್ರಂಪ್ ಅವರ ಈ ಪ್ರತೀಕಾರದ ಸುಂಕಗಳಿಂದಾಗಿ ಈಗಾಗಲೇ ಹಲವೆಡೆ ಷೇರು ಮಾರುಕಟ್ಟೆಗಳು ಪತನಗೊಂಡಿವೆ. ಅಮೆರಿಕ ಸೇರಿದಂತೆ ಎಲ್ಲ ಪ್ರಮುಖ ಮಾರುಕಟ್ಟೆಗಳು ಕುಸಿತದ ಹಾದಿಯಲ್ಲಿವೆ.

ಪ್ರತೀಕಾರದ ಸುಂಕಗಳ ಪರಿಣಾಮ ಏಷ್ಯಾದ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಜಪಾನ್‌ನ ನಿಕ್ಕಿ ಗುರುವಾರ ಬೆಳಗ್ಗೆ ಶೇ. 3.4 ಕ್ಕಿಂತ ಹೆಚ್ಚು ಕುಸಿದಿದೆ. ಭಾರತೀಯ ಮಾರುಕಟ್ಟೆಗಳು ಗುರುವಾರ ನಷ್ಟದೊಂದಿಗೆ ವಹಿವಾಟು ಆರಂಭಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಇನ್ನು ಯುಎಸ್ ಫ್ಯೂಚರ್ಸ್ ಮಾರುಕಟ್ಟೆಗಳು ಸಹ ಕುಸಿದಿವೆ.

ಇನ್ನು ಇದೇ ಸಂದರ್ಭದಲ್ಲಿ ಟ್ರಂಪ್ ಘೋಷಿಸಿದ ಶೇ. 26 ಸುಂಕಗಳ ಪರಿಣಾಮವನ್ನು ಭಾರತೀಯ ವಾಣಿಜ್ಯ ಸಚಿವಾಲಯ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಪ್ರತೀಕಾರದ ಸುಂಕಗಳ ಪರಿಣಾಮ ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದ್ದಂತೆ, ಹೂಡಿಕೆದಾರರು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಇದೀಗ ಹೂಡಿಕೆದಾರರ ಗಮನ ಚಿನ್ನದ ಮೇಲಿದೆ. ಏಕೆಂದರೆ, ಬೇರಿ ಕಡೆ ಹೂಡಿಕೆ ಮಾಡಿದರೆ ಕಡಿಮೆ ಬಡ್ಡಿ ಬರಬಹುದೆಂಬ ಕಾರಣಕ್ಕೆ ಎಲ್ಲರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಭಾವಿಸುತ್ತಿದ್ದಾರೆ. ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಲ್ಲಿ ಚಿನ್ನದ ದರವೂ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಭಾರತದಲ್ಲಿ ಚಿನ್ನದ ದರ ಹೆಚ್ಚುತ್ತಿದೆ ಎಂಬುದು ಗಮರನಾರ್ಹ ಸಂಗತಿ. ಇನ್ನು ಟ್ರಂಪ್ ಅವರ ಹೊಸ ಸುಂಕಗಳ ಪ್ರಭಾವದಿಂದಾಗಿ ಯುಎಸ್ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಹೆಚ್ಚಾಗಿದೆ. ಇದು ಪ್ರಸ್ತುತ ಒಂದು ಹಂತದಲ್ಲಿ ಒಂದು ಔನ್ಸ್ ಚಿನ್ನ 3,145.65 ಡಾಲರ್​ನಷ್ಟಿತ್ತು. ಇದೀಗ 3,167 ಡಾಲರ್​ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನಿರ್ಧಾರವು ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರಸ್ತುತ, ಭಾರತದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 92,830 ರಷ್ಟಿದೆ. ಟ್ರಂಪ್ ಅವರ ಸುಂಕಗಳ ಪರಿಣಾಮದಿಂದಾಗಿ ಚಿನ್ನದ ದರವು 93,000 ರೂ.ಗಳನ್ನು ದಾಟಿ ಹೊಸ ದಾಖಲೆಗಳನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ತಜ್ಞರು ಊಹಿಸಿದ್ದಾರೆ. (ಏಜೆನ್ಸೀಸ್​)