ನ್ಯೂಸ್

ಭಾರತದ ಮೇಲೆ ಟ್ರಂಪ್​ ಸುಂಕ ಸಮರ! ಪುಟಿನ್​ ಜತೆಗೆ ಅಜಿತ್ ದೋವಲ್​ ಮಾತುಕತೆ, ಹಲವು ವಿಷಯಗಳು ಚರ್ಚೆ | Trump Tariffs

ಮೋಹನ್​ ಶೆಟ್ಟಿ

Trump Tariffs: ಭಾರತದ ಮೇಲೆ ಶೇ.25ರಷ್ಟು ಸುಂಕದ ಜತೆಗೆ ದಂಡ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸುವುದಿಲ್ಲ ಎಂಬುದನ್ನು ತಿಳಿದು ಇದೀಗ ಹೆಚ್ಚುವರಿ ತೆರಿಗೆಯನ್ನು ಹಾಕಿರುವುದು ಸದ್ಯ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇರವಾಗಿ ಭೇಟಿಯಾಗಿದ್ದಾರೆ.

ರಷ್ಯಾ ಭೇಟಿಯ ಭಾಗವಾಗಿ ಇಂದು (ಆ.08) ಕ್ರೆಮ್ಲಿನ್‌ನಲ್ಲಿ ವ್ಲಾಡಿಮಿರ್ ಪುಟಿನ್​ರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾದರು. ಸಭೆಯಲ್ಲಿ ಭದ್ರತೆ, ಆರ್ಥಿಕ ಮತ್ತು ಇಂಧನ ಸಹಕಾರದ ಕುರಿತು ದ್ವಿಪಕ್ಷೀಯ ಚರ್ಚೆಗಳು ನಡೆದಿವೆ ಎಂದು ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ. ಟ್ರಂಪ್ ಭಾರತೀಯ ಆಮದುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿದ ಒಂದು ದಿನದ ಬಳಿಕ ಈ ಸಭೆ ನಡೆದಿದೆ.

ಬುಧವಾರ (ಆ.6) ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದರು. ಆದರೀಗ, ರಷ್ಯಾ ಮೇಲಿನ ಕೋಪವನ್ನು ಸಂಪೂರ್ಣವಾಗಿ ಭಾರತದ ಮೇಲಾಕಿರುವ ಟ್ರಂಪ್​, ಒಟ್ಟು ಸುಂಕದ ಹೊರೆಯನ್ನು ಶೇ.50ರಷ್ಟು ಏಕಾಏಕಿ ಹೆಚ್ಚಿಸಿರುವುದು ಭಾರತಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಈ ಕುರಿತು ಹಾಗೂ ರಷ್ಯಾ ಜತೆಗಿನ ತೈಲ ಮತ್ತು ವ್ಯಾಪಾರ ಸಂಬಂಧದ ಬಗ್ಗೆ ಚರ್ಚಿಸಲು ಅಜಿತ್ ದೋವಲ್​ ಮುಖತಃ ಭೇಟಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಜಿತ್ ದೋವಲ್​, ಭಾರತ ಮತ್ತು ರಷ್ಯಾ ಸಂಬಂಧ ಬಹಳ ವಿಶೇಷ. ಇದು ಎರಡೂ ದೇಶಗಳ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಭಾರತ-ರಷ್ಯಾ ವಿಶಿಷ್ಟ ಮತ್ತು ದೀರ್ಘಕಾಲದ ಸಂಬಂಧವನ್ನು ಹಂಚಿಕೊಳ್ಳುತ್ತವೆ. ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಅತ್ಯಂತ ಮಹತ್ವದ್ದಾಗಿ ನೋಡುತ್ತೇವೆ. ಉನ್ನತ ಮಟ್ಟದ ಸಭೆಗಳು ನಿರ್ಣಾಯಕವಾಗಿವೆ" ಎಂದಿದ್ದಾರೆ.

"ಶೀಘ್ರವೇ ಪುಟಿನ್ ಅವರು ಭಾರತಕ್ಕೆ ಬರಲಿದ್ದಾರೆ ಎಂಬ ಮಾತು ನಿಜಕ್ಕೂ ನಮಗೆ ಸಂತಸ ತಂದಿದೆ. ದಿನಾಂಕಗಳು ಬಹುತೇಕ ಅಂತಿಮಗೊಂಡಿವೆ. ಮುಖ್ಯ ವಿಷಯವೆಂದರೆ, ಶೃಂಗಸಭೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಸಹಕಾರವು ಬೆಳೆಯುತ್ತಲೇ ಇದೆ ಎಂದರು. 2018ರಲ್ಲಿ, ಭಾರತವು ರಷ್ಯಾದಿಂದ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಐದು ಸ್ಕ್ವಾಡ್ರನ್‌ಗಳಿಗೆ 5.43 ಬಿಲಿಯನ್ ಡಾಲರ್​ ಒಪ್ಪಂದಕ್ಕೆ ಸಹಿ ಹಾಕಿತು. ಇಲ್ಲಿಯವರೆಗೆ ಮೂರು ಸ್ಕ್ವಾಡ್ರನ್‌ಗಳನ್ನು ಭಾರತಕ್ಕೆ ಬಂದಿವೆ,(ಏಜೆನ್ಸೀಸ್).