Trump Tariff : ಕೆಲವು ದಿನಗಳ ಹಿಂದಷ್ಟೇ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಪ್ರತೀಕಾರದ ಸುಂಕ ವಿಧಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತೆರಿಗೆಯ ವಿಚಾರದಲ್ಲಿ ಸಂಚಲನಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹೌದು, ಟ್ರಂಪ್ ಅವರು ವಿಧಿಸಿದ್ದ ಪ್ರತೀಕಾರದ ಸುಂಕಗಳನ್ನು 90 ದಿನಗಳವರೆಗೆ ಅಮಾನತ್ತಿನಲ್ಲಿ ಇಡುವುದಾಗಿ ಘೋಷಿಸಿದ್ದಾರೆ. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಇದು ಚೀನಾಕ್ಕೆ ಅನ್ವಯಿಸುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ಅಂದಹಾಗೆ ಅಮೆರಿಕ 70 ದೇಶಗಳ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿದೆ. ಸದ್ಯ ಈ ನಿರ್ಧಾರವನ್ನು ಅಮಾನತ್ತಿನಲ್ಲಿ ಇಟ್ಟಿದ್ದು, ಚೀನಾಗೆ ಮಾತ್ರ ಸುಂಕವನ್ನು ಮುಂದುವರಿಸಲಿದೆ. ಇದಿಷ್ಟೇ ಅಲ್ಲದೆ, ಚೀನಾದ ಮೇಲಿನ ಸುಂಕವನ್ನು 104 ರಿಂದ 125 ಪ್ರತಿಶತಕ್ಕೆ ಹೆಚ್ಚಿಸುವುದಾಗಿ ಅಮೆರಿಕ ಘೋಷಿಸಿದೆ. ಹೀಗಾಗಿ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಇದೀಗ ಉಲ್ಬಣಗೊಂಡಿದೆ.
ಅಮೆರಿಕದ ಶೇ. 104 ತೆರಿಗೆಗೆ ಪ್ರತೀಕಾರವಾಗಿ ಅಮೆರಿಕದ ಸರಕುಗಳ ಮೇಲೆ 84 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಚೀನಾ ಘೋಷಿಸಿದೆ. ಇದರ ಬೆನ್ನಲ್ಲೇ ಡ್ರ್ಯಾಗನ್ ರಾಷ್ಟ್ರದ ಮೇಲಿನ ಸುಂಕವನ್ನು 125 ಪ್ರತಿಶತಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಟ್ರಂಪ್ ಮತ್ತೊಮ್ಮೆ ಘೋಷಿಸಿದ್ದಾರೆ. ಅಲ್ಲದೆ, ಚೀನಾ ಜಾಗತಿಕ ಮಾರುಕಟ್ಟೆಗಳನ್ನು ಅಗೌರವಿಸಿದೆ. ಅದಕ್ಕಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ತಿಳಿಸಿದರು.
ಜಾಗತಿಕ ಮಾರುಕಟ್ಟೆಗಳ ಬಗ್ಗೆ ಚೀನಾದ ಅಗೌರವತೆ ಆಧಾರದ ಮೇಲೆ, ನಾನು ಚೀನಾದ ಮೇಲಿನ ಅಮೆರಿಕದ ಸುಂಕವನ್ನು 125% ಕ್ಕೆ ಹೆಚ್ಚಿಸುತ್ತಿದ್ದೇನೆ. ಇದು ತಕ್ಷಣವೇ ಜಾರಿಗೆ ಬರಲಿದೆ. ಅಮೆರಿಕ ಮತ್ತು ಇತರ ದೇಶಗಳನ್ನು ಶೋಷಿಸುವ ದಿನಗಳು ಇನ್ನು ಮುಂದೆ ಸ್ವೀಕಾರಾರ್ಹವಲ್ಲ ಎಂದು ಚೀನಾ ಅರಿತುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಅಂತ ಟ್ರಂಪ್ ಹೇಳಿದರು.
75ಕ್ಕೂ ಹೆಚ್ಚು ದೇಶಗಳು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿವೆ ಮತ್ತು ಯಾವುದೇ ರೀತಿಯಲ್ಲಿ ಅಥವಾ ರೂಪದಲ್ಲಿ ಸುಂಕಗಳಿಗೆ ಪ್ರತೀಕಾರ ತೀರಿಸಿಲ್ಲ ಎಂದು ಪ್ರತಿಪಾದಿಸಿದ ಟ್ರಂಪ್, 90 ದಿನಗಳ ವಿರಾಮವನ್ನು ಅನುಮೋದಿಸಿದ್ದೇನೆ ಮತ್ತು ಅದು ತಕ್ಷಣವೇ ಜಾರಿಗೆ ಬರುತ್ತದೆ ಎಂದು ಹೇಳಿದರು. (ಏಜೆನ್ಸೀಸ್)