ಕಳೆದ 70 ದಿನಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸುತ್ತಲೇ ಇದ್ದ ಪಾರಸ್ಪರಿಕ ತೆರಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಬೆಳಗಿನ ಜಾವ 2 ಗಂಟೆಗೆ ಅಧಿಕೃತವಾಗಿ ಘೋಷಿಸಿದರು. ಭಾರತ ಸೇರಿದಂತೆ ಜಗತ್ತಿನ 182 ರಾಷ್ಟ್ರಗಳ ಮೇಲೆ ಈ ಮೂಲಕ ಹೆಚ್ಚುವರಿ ಸುಂಕ ಘೋಷಿಸಿದ್ದು, ಇದರ ವ್ಯತಿರಿಕ್ತ ಪರಿಣಾಮ ಬಹುತೇಕ ಎಲ್ಲ ವಲಯಗಳ ಮೇಲೂ ಆಗಲಿದೆ. ಭಾರತದ ಮೇಲೆ ಶೇಕಡ 27ರಷ್ಟು ಪಾರಸ್ಪರಿಕ ತೆರಿಗೆ ಹೇರಿರುವ ಟ್ರಂಪ್, ನೆರೆ ರಾಷ್ಟ್ರಗಳ ಮೇಲಂತೂ ಭಾರಿ ಹೊರೆಯನ್ನು ಹೊರಿಸಿದ್ದಾರೆ. ಇದೆಲ್ಲದರ ವಿವರ ಇಲ್ಲಿದೆ.
‘ಇಂದು ನಮಗೆ ಆರ್ಥಿಕ ಸ್ವಾತಂತ್ರ್ಯದ ದಿನ. ಇನ್ನು ಮುಂದೆ ಅಮೆರಿಕದಲ್ಲಿ ಬಹಳಷ್ಟು ಬದಲಾಗಲಿದೆ ಮತ್ತು ನಾವು ಅಮೆರಿಕವನ್ನು ಮತ್ತೆ ಮಹಾನ್ ಆಗಿಸಬೇಕಿದೆ. ನಾವು ಪಾರಸ್ಪರಿಕ ತೆರಿಗೆಯನ್ನು ಘೋಷಿಸಿದ್ದೇವೆ. ಅಂದರೆ ಯಾವ ದೇಶ ನಮ್ಮ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುತ್ತಿದೆಯೋ, ಆ ದೇಶದೊಂದಿಗೆ ನಾವೂ ಹಾಗೇ ವ್ಯವಹರಿಸಲಿದ್ದೇವೆ. ಕನಿಷ್ಠ ಶೇಕಡ 10ರಷ್ಟು ತೆರಿಗೆಯನ್ನು ಮೂಲವಾಗಿ ಇರಿಸಿಕೊಂಡಿದ್ದೇವೆ’ ಎಂದು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿತ್ರರಾಷ್ಟ್ರಗಳ ಮೇಲೂ ಮುಲಾಜಿಲ್ಲದೆ ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾರಿಫ್) ಹೇರಿದ್ದಾರೆ. ಭಾರತ ಸೇರಿದಂತೆ 182 ದೇಶಗಳಿಗೆ ಶೇಕಡ 10ರಿಂದ ಶೇ.54ರವರೆಗೆ ತೆರಿಗೆ ವಿಧಿಸಿದ್ದಾರೆ. ಈ ಹೊಸ ಪಾರಸ್ಪರಿಕ ತೆರಿಗೆಗಳಲ್ಲಿ ಶೇ. 10ರ ಮೂಲ ಕರ ಏ. 5ರಿಂದ ಮತ್ತು ಇತರ ಕರಗಳು ಏ. 9ರಿಂದ ಜಾರಿಗೆ ಬರಲಿವೆ.
ಡೆಮಾಕ್ರಟಿಕ್ ಪಕ್ಷದ ಹಾಗೂ ಭಾರತಮೂಲದ ಹಲವು ಸಂಸದರು ಟ್ರಂಪ್ ನಿರ್ಧಾರವನ್ನು ವಿರೋಧಿಸಿದ್ದಾರೆ. ಪಾರಸ್ಪರಿಕ ತೆರಿಗೆ ಕ್ರಮದಿಂದ ವಿಶ್ವದಲ್ಲಿ ಅಮೆರಿಕ ಪ್ರತ್ಯೇಕ ಅಥವಾ ಏಕಾಂಗಿಯಾಗಿ ಉಳಿಯಲಿದೆ ಎಂದಿದ್ದಾರೆ. ‘ತೆರಿಗೆ ಪಾವತಿಸುವ ಉದ್ಯೋಗಿಗಳ ಮೇಲೆ ಇದು ಹೆಚ್ಚಿನ ಹೊರೆ ಉಂಟು ಮಾಡಲಿದೆ. ರೆಸಿಪ್ರೋಕಲ್ ಟ್ಯಾರಿಫ್ ಆತ್ಮಘಾತಕ ನಿರ್ಧಾರವಾಗಿದ್ದು, ಮೊದಲೇ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ಸೃಷ್ಟಿಯಾಗಲಿದೆ. ಅಮೆರಿಕದ ಮಿತ್ರರಾಷ್ಟ್ರಗಳ ಮೇಲೂ ವ್ಯತಿರಿಕ್ತ ಪರಿಣಾಮವಾಗಲಿದೆ’ ಎಂದು ಡೆಮಾಕ್ರಟಿಕ್ ಪಕ್ಷದ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.
ವಿದೇಶದಲ್ಲಿ ತಯಾರಾಗುವ ಎಲ್ಲ ವಾಹನಗಳ ಆಮದಿನ ಮೇಲೆ ಅಮೆರಿಕ ಶೇಕಡ 25ರಷ್ಟು ತೆರಿಗೆ ವಿಧಿಸಲಿದೆ. ಇದನ್ನು ಮಾರ್ಚ್ 27ರಂದು ಘೋಷಿಸಿದ್ದ ಟ್ರಂಪ್, ಪಾರಸ್ಪರಿಕ ತೆರಿಗೆ ಘೋಷಣೆಯ ವೇಳೆ ಪುನರುಚ್ಚರಿಸಿದ್ದಾರೆ. ಅಲ್ಲದೆ, ಅಮೆರಿಕದ ಕಂಪನಿಗಳಿಂದ ಹೊರದೇಶಗಳಲ್ಲಿ ಅಸೆಂಬಲ್ ಆಗುವ ವಾಹನಗಳಿಗೂ ಈ ಭಾರಿ ತೆರಿಗೆ ಅನ್ವಯವಾಗಲಿದೆ. ಹೊರದೇಶಗಳು ತಯಾರಿಸುತ್ತಿದ್ದ ವಾಹನಗಳ ಮೇಲೆ ಅಮೆರಿಕ ಈವರೆಗೆ 2.4% ತೆರಿಗೆ ವಿಧಿಸುತ್ತಿತ್ತು. ಇನ್ಮುಂದೆ ಇದು ಶೇ.25ರಷ್ಟಿರಲಿದೆ. ಉಕ್ಕು, ಅಲ್ಯುಮಿನಿಯಂ ವಸ್ತುಗಳ ಮೇಲೂ ಶೇ.25 ತೆರಿಗೆ ವಿಧಿಸಲಾಗಿದೆ.
ಪರಿಣಾಮ: ಅಮೆರಿಕದಲ್ಲಿ ಕಾರುಗಳ ಬೆಲೆ ಸಾವಿರಾರು ಡಾಲರ್ನಷ್ಟು ಏರಿಕೆಯಾಗಲಿದೆ. ಗ್ರಾಹಕರಿಗೆ ಆಯ್ಕೆಗಳು ಕಡಿಮೆಯಾಗಲಿವೆ. ಅಮೆರಿಕದ ಉತ್ಪಾದನಾ ವಲಯದಲ್ಲಿ ಉದ್ಯೋಗಗಳು ಕಡಿಮೆಯಾಗಲಿವೆ. ಹಣದುಬ್ಬರದಿಂದ ನಲುಗಿರುವ ಸಾರ್ವಜನಿಕರಿಗೆ ಮತ್ತಷ್ಟು ಹೊರೆಯಾಗಲಿದೆ.
ದಶಕಗಳಿಂದ ನಮ್ಮ ದೇಶವನ್ನು (ಅಮೆರಿಕ) ಮಿತ್ರ, ವೈರಿ ರಾಷ್ಟ್ರಗಳು ಎರಡೂ ಸಮಾನವಾಗಿ ಲೂಟಿ ಮಾಡಿವೆ. ಈಗಲೂ ಲೂಟಿ ಮಾಡುತ್ತಿವೆ. ಅದನ್ನು ತಡೆಯುವುದು ನನ್ನ ಉದ್ದೇಶ. ಆದರೂ, ಸಂಪೂರ್ಣವಾಗಿ ಪಾರಸ್ಪರಿಕ ತೆರಿಗೆಯನ್ನು (ರೆಸಿಪ್ರೋಕಲ್ ಟ್ಯಾರಿಫ್) ವಿಧಿಸಿಲ್ಲ. ಹಾಗೇನಾದರೂ ಮಾಡಿದ್ದಲ್ಲಿ ಬಹಳಷ್ಟು ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದವು. ಹಾಗೆ ಮಾಡುವುದು ನಮ್ಮ ಉದ್ದೇಶವಲ್ಲ. ಆಯಾ ರಾಷ್ಟ್ರಗಳು ಅಮೆರಿಕದ ಮೇಲೆ ವಿಧಿಸುತ್ತಿದ್ದ ತೆರಿಗೆಯ ಅರ್ಧದಷ್ಟನ್ನು ಮಾತ್ರ ನಾವು ವಿಧಿಸಿದ್ದೇವೆ. | ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅಮೆರಿಕ ವಿಶ್ವದ ಶ್ರೀಮಂತ ರಾಷ್ಟ್ರವಾಗಲಿದೆ: ಪ್ರಪಂಚದ ಯಾವುದೇ ರಾಷ್ಟ್ರಕ್ಕಿಂತ ಅಮೆರಿಕ ಸಿರಿವಂತವಾಗಲಿದೆ. ‘ಅಮೆರಿಕ ಮೊದಲು’ ನೀತಿಯನ್ನು ಜಾರಿಗೆ ತಂದಿದ್ದೇವೆ. ನಾವು ಇನ್ನಷ್ಟು ಶ್ರೀಮಂತರಾಗಲಿದ್ದೇವೆ ಮತ್ತು ನಾವೀಗ ಜಾಣರಾಗಿದ್ದೇವೆ.
ಬಯಸುವ ಯಾವುದೇ ರಾಷ್ಟ್ರ, ಯಾವುದೇ ಕಂಪನಿ ಪಾರಸ್ಪರಿಕ ತೆರಿಗೆಯನ್ನು ಪಾವತಿಸಬೇಕು. ಇದರಿಂದ ವಿನಾಯ್ತಿ ಬಯಸುವವರು ಅಮೆರಿಕದಲ್ಲಿಯೇ ತಮ್ಮ ಉತ್ಪನ್ನ ಗಳನ್ನು ತಯಾರಿಸಲಿ. ಟ್ಯಾರಿಫ್ನಿಂದ ಅಮೆರಿಕದ ಅಭಿವೃದ್ಧಿ ಆಗಲಿದೆ.
ಕಾರ್ಖಾನೆಗಳು, ಉದ್ಯೋಗಗಳು ಅಮೆರಿಕಕ್ಕೆ ವಾಪಸ್ ಆಗಲಿವೆ: ಹಲವು ದೇಶಗಳು ಅಮೆರಿಕ ಮಾರುಕಟ್ಟೆಯ ಲಾಭ ಪಡೆದುಕೊಂಡು ತಾವು ಸಮೃದ್ಧವಾಗಿವೆ. ಆದರೆ, ಅಮೆರಿಕದ ಉತ್ಪನ್ನಗಳ ಮೇಲೆ ತಮ್ಮ ದೇಶದಲ್ಲಿ ಭಾರಿ ತೆರಿಗೆ ವಿಧಿಸಿದವು. ಈಗ ಅಮೆರಿಕ ತನ್ನ ಲಾಭಕ್ಕಾಗಿ ಚಿಂತನೆ ಮಾಡಲಿದೆ, ಅದಕ್ಕಾಗಿ ಕೆಲಸ ಮಾಡಲಿದೆ. ಹಾಗಾಗಿ, ಕಾರ್ಖಾನೆಗಳು, ಕಂಪನಿಗಳು, ಉದ್ಯೋಗಗಳು ಅಮೆರಿಕಕ್ಕೆ ವಾಪಸ್ ಆಗಲಿವೆ. ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಇದು ಆಮದು ಸುಂಕ. ವಿದೇಶಗಳಿಂದ ಬರುವ ಸರಕುಗಳ ಮೇಲೆ ಇದು ಅನ್ವಯಿಸುತ್ತದೆ. ಈಗ ಆಮದು ಸುಂಕ ಹೆಚ್ಚಿಸಿ ರುವುದರಿಂದ ದೇಶೀಯ/ಪ್ರಾದೇಶಿಕ ಮಾರುಕಟ್ಟೆಯಲ್ಲಿ ವಿದೇಶಿ ಸರಕುಗಳು ದುಬಾರಿ ಯಾಗಲಿವೆ. ಟ್ಯಾರಿಫ್ ಹೆಚ್ಚಿಸಿ ರುವುದರಿಂದ ಅಮೆರಿಕ ಸರ್ಕಾರದ ಆದಾಯ ಹೆಚ್ಚಲಿದೆ ಯಾದರೂ, ವಿದೇಶ ದಿಂದ ಬರುವ ಸರಕುಗಳ ಬೆಲೆ ಹೆಚ್ಚಲಿದ್ದು, ಅದರ ನೇರ ಪರಿಣಾಮ ಜನಸಾಮಾನ್ಯರ ಮೇಲಾಗಲಿದೆ. ದೇಶೀಯ ಉತ್ಪಾದನೆಗೆ ಒತ್ತು ನೀಡುವುದು ಹಾಗೂ ದೇಶೀಯ ಉದ್ಯಮಗಳನ್ನು ರಕ್ಷಿಸುವುದು ಈ ಕ್ರಮದ ಉದ್ದೇಶವಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾರಸ್ಪರಿಕ ಸುಂಕ ಘೊಷಿಸಿದ ಬೆನ್ನಲ್ಲೇ ಅಮೆರಿಕದ ಷೇರು ಮಾರುಕಟ್ಟೆ ಗುರುವಾರ ಸುಮಾರು ಶೇ. 4ರಷ್ಟು ಭಾರಿ ಕುಸಿತ ದಾಖಲಿಸಿದೆ. 2022ರ ಸೆಪ್ಟೆಂಬರ್ ನಂತರದ ಅವಧಿಯಲ್ಲೇ ಇದು ಅತ್ಯಂತ ದೊಡ್ಡ ಪ್ರಮಾಣದ ಕುಸಿತವಾಗಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್ ಸೂಚ್ಯಂಕ ಶೇ. 3.3ರಷ್ಟು ಕುಸಿದರೆ, ನಾಸ್ಡಾಕ್ ಕಂಪೋಸಿಟ್ ಸೂಚ್ಯಂಕ ಶೇ. 5ರಷ್ಟು ಕುಸಿತ ಕಂಡಿದೆ.
ಅತಿ ಹೆಚ್ಚು ‘ಪ್ರಹಾರ’ಕ್ಕೊಳಗಾದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದರೂ ಈ ಸವಾಲುಗಳನ್ನು ಭಾರತ ಸರಾಗವಾಗಿ ಎದುರಿಸಲು ಶಕ್ತವಾಗಿದೆ. ಆರಂಭದಲ್ಲಿ ಭಾರತದ ಉದ್ಯಮಗಳಿಗೆ ಸ್ವಲ್ಪ ತೊಂದರೆಯಾಗಲಿದ್ದು, ಇದಕ್ಕೆ ವಿವಾದದ ರೂಪ ನೀಡದೇ, ಭಾರತವು ಅಮೆರಿಕದೊಂದಿಗೆ ಸಮಾಲೋಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ಸಂಪತ್ತು ನಿರ್ವಹಣೆಯ ಖಾಸಗಿ ಕಂಪನಿ ‘ಬರ್ನ್ಸ್ಟೈನ್’ ವಿಶ್ಲೇಷಿಸಿದೆ.
‘ಆತ್ಮನಿರ್ಭರ’ದಿಂದಾಗಿ ಭಾರತದ ಜಿಡಿಪಿ ಮೇಲೆ ಟ್ರಂಪ್ ತೆರಿಗೆ ಕೇವಲ ಶೇ. 0.1ರಷ್ಟು ಅಲ್ಪಾವಧಿ ಪರಿಣಾಮ ಬೀರಬಹುದು. ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಭಾರತ ಮತ್ತೆ ಚೇತರಿಸಿಕೊಳ್ಳುತ್ತದೆ ಎಂದು ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಹೇಮಂತ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ಏಷ್ಯಾದ ಇತರ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ್ದು ಹೆಚ್ಚು ಆಂತರಿಕ ವಹಿವಾಟು ಉಳ್ಳ ಮಾರುಕಟ್ಟೆ. ಹಾಗಾಗಿ ಬಾಹ್ಯ ಕ್ರಿಯೆಗಳ ಪರಿಣಾಮ ಅತ್ಯಲ್ಪ ಎಂಬುದು ಅಸೋಚಾಮ್ ಅಧ್ಯಕ್ಷ ಸಂಜಯ್ ನಾಯರ್ ಅಭಿಮತ.
ಚೀನಾ, ವಿಯೆಟ್ನಾಂ, ತೈವಾನ್, ಥಾಯ್ಲೆಂಡ್, ಬಾಂಗ್ಲಾದೇಶ ಸೇರಿದಂತೆ ಹಲವು ಏಷ್ಯಾದ ಮತ್ತು ಯೂರೋಪಿನ ರಾಷ್ಟ್ರಗಳ ಮೇಲೆ ಟ್ರಂಪ್ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಭಾರತಕ್ಕೆ ಜಾಗತಿಕ ವ್ಯಾಪಾರ ಮತ್ತು ಉತ್ಪಾದನೆಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ ಎಂದು ಗ್ಲೋಬಲ್ ಟ್ರೇಡ್ ರೀಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.
1. ಅಮೆರಿಕವು ಕೂಡಲೇ ಈ ಪಾರಸ್ಪರಿಕ ತೆರಿಗೆಯನ್ನು ರದ್ದುಪಡಿಸಬೇಕು. ಅಮೆರಿಕದ ಈ ನಡೆಯು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಅಪಾಯ ತಂದೊಡ್ಡಲಿದೆ. ಇದರಿಂದ ಅಂತಾರಾಷ್ಟ್ರೀಯ ಪೂರಕ ಸರಪಳಿಗೆ ಮತ್ತೊಮ್ಮೆ ಅಪಾಯ ಉಂಟು ಮಾಡಲಿದೆ. | ಚೀನಾ ವಾಣಿಜ್ಯ ಸಚಿವಾಲಯ
2. ಟ್ರಂಪ್ ಅವರ ಈ ನಡೆ ಜಾಗತಿಕ ವ್ಯಾಪಾರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕಾರ್ಯವಾಗಿದೆ. ಉಕ್ಕು, ಅಲ್ಯುಮಿನಿಯಂ ಮತ್ತು ವಾಹನಗಳ ಮೇಲೆ ವಿಧಿಸಿರುವ ಪಾರಸ್ಪರಿಕ ತೆರಿಗೆಯು ಕೆನಡಾದ ಜನರ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ಮೂಲಕವೇ ಉತ್ತರ ಕೊಡಲಾಗುವುದು. | ಮಾರ್ಕ್ ಕಾರ್ನೆ ಕೆನಡಾ ಪ್ರಧಾನಿ
3. ಈ ವ್ಯಾಪಾರ ಯುದ್ಧದಲ್ಲಿ ಯಾರ ಹಿತವೂ ಇಲ್ಲ. ಆದರೆ, ಎಲ್ಲ ರೀತಿಯ ಬದಲಾವಣೆಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. | ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ
4. ನಮಗೆ ಖಂಡಿತವಾಗಿಯೂ ವ್ಯಾಪಾರ ಯುದ್ಧ ಬೇಕಿಲ್ಲ. ಅಮೆರಿಕದೊಂದಿಗೆ ಉತ್ತಮ ಸಹಕಾರ ಹೊಂದಲು ಬಯಸುತ್ತೇವೆ. ಈ ಮೂಲಕ ನಮ್ಮ ದೇಶದ ಜನರು ಉತ್ತಮ ಬದುಕು ನಡೆಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. | ಮೈಕೆಲ್ ಮಾರ್ಟಿನ್ ಐರ್ಲೆಂಡ್ ಪ್ರಧಾನಿ
5. ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಿ ಈ ವ್ಯಾಪಾರ ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಪಾರಸ್ಪರಿಕ ತೆರಿಗೆಯಂಥ ಪ್ರಹಾರಗಳು ಪಶ್ಚಿಮವನ್ನು ಇನ್ನಷ್ಟು ದುರ್ಬಲಗೊಳಿಸಲಿವೆ.
| ಜಾರ್ಜಿಯಾ ಮೆಲೊನಿ ಇಟಲಿ ಪ್ರಧಾನಿ
6. ಈ ನ್ಯಾಯಯುತವಲ್ಲದ ನಡೆಯಿಂದಾಗಿ ಅಮೆರಿಕದ ಜನರು ದೊಡ್ಡ ಬೆಲೆಯನ್ನೇ ತೆರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
| ಅಂಥೊಣಿ ಅಲ್ಬೆನೀಸ್ ಆಸ್ಟ್ರೇಲಿಯಾ ಪ್ರಧಾನಿ
7. ನಮ್ಮ ಕಂಪನಿಗಳು ಹಾಗೂ ಕಾರ್ವಿುಕರ ಹಿತ ಕಾಯಲು ಆದ್ಯತೆ ನೀಡುತ್ತೇವೆ. ಅಲ್ಲದೆ, ಜಗತ್ತಿಗೆ ತೆರೆದುಕೊಳ್ಳುವ ನೀತಿಯನ್ನು ಮುಂದುವರಿಸುತ್ತೇವೆ.
| ಪೆಡ್ರೊ ಸ್ಯಾನ್ಷೆ ಸ್ಪೇನ್ ಪ್ರಧಾನಿ
8. ಅಮೆರಿಕದಲ್ಲಿ ಈಗ ಅಸಮಾನತೆ ಕೊನೆಗೊಳ್ಳಲಿದೆ. ಅಮೆರಿಕದ ಉದ್ಯಮಗಳು ಹಾಗೂ ಕಾರ್ವಿುಕರಿಗೆ ಇದರ ಪ್ರಯೋಜನ ದೊರೆಯಲಿದೆ. ಸ್ಥಳೀಯ ಉತ್ಪಾದನೆ ಹೆಚ್ಚುವ ಮೂಲಕ, ವಿದೇಶಗಳ ಮೇಲಿನ ಅವಲಂಬನೆ ತಗ್ಗಲಿದೆ.
| ಶ್ವೇತಭವನದ ಅಧಿಕೃತ ಹೇಳಿಕೆ