Delhi: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್ ಎಂದಿದ್ದು, ಇತ್ತ ದೇಶದ ವಿರೋಧ ಪಕ್ಷ Congress ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ(ಅ. 14) ತೀವ್ರ ವಾಗ್ದಾಳಿ ನಡೆಸಿದೆ.
ಡೊನಾಲ್ಡ್ ಟ್ರಂಪ್ ಅವರ ಮುನೀರ್ ಹೊಗಳಿಕೆಯೂ ನಮ್ಮ ದೇಶದ ಕೆಟ್ಟ ವಿದೇಶಾಂಗ ನೀತಿಯನ್ನು ಪ್ರತಿಬಿಂಬಿಸುತ್ತದೆ. ವಿದೇಶಾಂಗ ನೀತಿಯನ್ನು ರೂಪಿಸುವುದರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರನ್ನು ತಮ್ಮ ಒಳ್ಳೆಯ ಸ್ನೇಹಿತ ಎಂದು ಕರೆಯುತ್ತಲೇ ಇದ್ದಾರೆ. ಹಾಗೆ ನ್ಯಾಯವಾಗಿ ಹೇಳಬೇಕೆಂದರೆ ಅಮೆರಿಕದ ನಾಯಕ ಸಹ ಮೋದಿ ಅವರನ್ನು ತಮ್ಮ ಒಳ್ಳೆಯ ಸ್ನೇಹಿತ ಎಂದು ಕರೆಯುತ್ತಲೇ ಇದ್ದಾರೆ. ಆದರೆ ಇದು ಯಾವ ರೀತಿಯ ಸ್ನೇಹ?. ಟ್ರಂಪ್ ಅವರು 2025 ಜೂನ್ 18ರಂದು ಶ್ವೇತಭವನದಲ್ಲಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ಗೆ ಭೋಜನ ಕೂಟವನ್ನು ಆಯೋಜಿಸಿದ್ದರು.
ನಿನ್ನೆ ಈಜಿಪ್ಟ್‌ನಲ್ಲಿ ಮತ್ತೆ ಅಸಿಮ್ ಮುನೀರ್ ಅವರನ್ನು 'ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್' ಎಂದು ಕರೆದು ಪಾಕಿಸ್ತಾನದ ಪ್ರಧಾನಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಅಮೆರಿಕ ಅಧ್ಯಕ್ಷರೊಂದಿಗೆ ತಮ್ಮನ್ನು ತಾವು ಮೆಚ್ಚಿಕೊಳ್ಳಲು ಮೋದಿ ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಅಧ್ಯಕ್ಷ ಟ್ರಂಪ್ ಭಾರತಕ್ಕೆ ಯಾವ ರೀತಿಯ ಸಂಕೇತವನ್ನು ಕಳುಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ಕೊನೆಗೊಂಡ ನಂತರ ಈಜಿಪ್ಟ್‌ನಲ್ಲಿ ವಿಶ್ವ ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲು ಪಾಕಿಸ್ತಾನ ಪ್ರಧಾನಿಯನ್ನು ಆಹ್ವಾನಿಸುವಾಗ ಟ್ರಂಪ್ ಷರೀಫ್ ಮತ್ತು ಮುನೀರ್ ಇಬ್ಬರನ್ನು ಶ್ಲಾಘಿಸಿದರು. ಸ್ಥಳದಲ್ಲಿ ಮುನೀರ್ ಹಾಜರಿಲಿಲ್ಲ. ಆದರೆ ಮುನೀರ್ ಅವರನ್ನು "ಪಾಕಿಸ್ತಾನದ ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್" ಎಂದು ಕರೆದರು. ಮುಂದುವರೆದು ಪ್ರಧಾನಿ ಮೋದಿಯ ಹೆಸರನ್ನು ಉಲ್ಲೇಖಿಸದೆ ಭಾರತವನ್ನು ಹೊಗಳಿದ ಟ್ರಂಪ್, ಭಾರತವು ನನ್ನ ಉತ್ತಮ ಸ್ನೇಹಿ ದೇಶ ಎಂದು ಹೇಳಿದ್ದಾರೆ. (ಏಜೆನ್ಸೀಸ್)