ವಾಷಿಂಗ್ಟನ್: ಆಗಸ್ಟ್ 1 ರಿಂದ ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (07) ಘೋಷಿಸಿದ್ದಾರೆ. ಈ ಬಗ್ಗೆ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ ಮೂಲಕ ಎರಡೂ ದೇಶಗಳ ನಾಯಕರಿಗೆ ಕಳುಹಿಸಲಾದ ಪತ್ರಗಳ ಪ್ರತಿಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೀರೊಳಗೆ ಬಿತ್ತು 4 ದಿನದ ಹಿಂದೆ ಖರೀದಿಸಿದ ಐಫೋನ್: ಹಲವು ಗಂಟೆಯ ನಂತ್ರ ಮತ್ತೆ ಸಿಕ್ಕಿದಾಗ ಕಾದಿತ್ತು ಅಚ್ಚರಿ! iPhone
ಅಮೆರಿಕ ಮೇಲೆ ಇತರೆ ರಾಷ್ಟ್ರಗಳು ಹೇರುತ್ತಿರುವ ಸುಂಕ ನೀತಿ ವಿರುದ್ದ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ವಿವಿಧ ರಾಷ್ಟ್ರಗಳ ವಿರುದ್ದ ಈ ಹೊಸ ತೆರಿಗೆ ನೀತಿಯನ್ನು ಘೋಷಿಸಿದ್ದಾರೆ. ವ್ಯಾಪಾರ ಪಾಲುದಾರಿಗೆ ಹೊಸ ಒಪ್ಪಂದಗಳನ್ನು ತಲುಪಲು ನೀಡಿದ್ದ ಗಡುವು ಮುಗಿಯುವ ಕೆಲವು ದಿನಗಳ ಮೊದಲೇ ಟ್ರಂಪ್ ಸರ್ಕಾರದಿಂದ ಈ ನಿರ್ಧಾರ ಹೊರ ಬಿದ್ದಿದೆ.
ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಟ್ರಂಪ್ ಪತ್ರ ಬರೆದಿದ್ದು, ಆಗಸ್ಟ್ 1 ರಿಂದ, ಜಪಾನ್‌ನಿಂದ ಅಮೆರಿಕಕ್ಕೆ ಬರುವ ಪ್ರತಿಯೊಂದು ವಸ್ತುವು ಯಾವುದೇ ಉತ್ಪನ್ನವಾಗಿದ್ದರೂ ಸಹ 25% ಸುಂಕಕ್ಕೆ ಒಳಪಟ್ಟಿರುತ್ತದೆ. ಹೆಚ್ಚಿನ ಸುಂಕವನ್ನು ತಪ್ಪಿಸಲು ಯಾರಾದರೂ ಬುದ್ಧಿವಂತರಾಗಲು ಪ್ರಯತ್ನಿಸಿದರೆ, ಅವರ ಮೇಲೂ ಅದೇ ಭಾರೀ ಸುಂಕವನ್ನು ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾಕ್ಕೂ ಇದೇ ರೀತಿಯ ಪತ್ರ ಬರೆಯಲಾಗಿದೆ. ಪ್ರತಿಕ್ರಿಯೆಯಾಗಿ ಅವರು ತಮ್ಮ ಸುಂಕಗಳನ್ನು ಹೆಚ್ಚಿಸಿದರೆ, ಅಮೆರಿಕವು ತನ್ನ 25% ಸುಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಟ್ರಂಪ್ ಎರಡೂ ದೇಶಗಳನ್ನು ಎಚ್ಚರಿಸಿದ್ದಾರೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿನ ಕಾರುಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಕೈಗಾರಿಕೆಗಳು ಕಠಿಣ ಸಮಯವನ್ನು ಎದುರಿಸಬಹುದು ಎಂದು ಅವುಗಳ ಮೇಲೆ ಸಂಭಾವ್ಯ ಪರಿಣಾಮಗಳ ಬಗ್ಗೆ ಟ್ರಂಪ್ ನಿರ್ದಿಷ್ಟವಾಗಿ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು... ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್! Cardiac Arrest
ಇದೇ ರೀತಿಯ ವ್ಯಾಪಾರ ಪತ್ರಗಳನ್ನು ಇನ್ನೂ 12 ರಾಷ್ಟ್ರಗಳಿಗೆ ಕಳುಹಿಸಲಾಗುವುದು ಎಂದು ಶ್ವೇತಭವನ ತಿಳಿಸಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾದ ಸರಕುಗಳ ಮೇಲೆ ಹೊಸದಾಗಿ ಘೋಷಿಸಲಾದ ಶೇ. 25 ರಷ್ಟು ಸುಂಕಗಳಲ್ಲಿ ಕಡಿತದ ಸಾಧ್ಯತೆಯನ್ನು ಟ್ರಂಪ್ ಸೂಚಿಸಿದ್ದಾರೆ. ಮ್ಯಾನ್ಮಾರ್, ಲಾವೋಸ್, ಥೈಲ್ಯಾಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಕಝಾಕಿಸ್ತಾನ್, ಇಂಡೋನೇಷ್ಯಾ, ಟುನೀಶಿಯಾ, ಮಲೇಷ್ಯಾ, ಸೆರ್ಬಿಯಾ, ಕಾಂಬೋಡಿಯಾ ಮತ್ತು ಬೋಸ್ನಿಯಾ ಮತ್ತು ಹರ್ಜೆಗೋವಿನಾ ಸೇರಿದಂತೆ ಇತರ ದೇಶಗಳ ಸುಂಕ ಪತ್ರಗಳನ್ನು ಅಮೆರಿಕ ಅಧ್ಯಕ್ಷರು ಹಂಚಿಕೊಂಡಿದ್ದಾರೆ.