ನ್ಯೂಸ್

ಸುಂಕ ವಿಧಿಸುವ ಅಧಿಕಾರ ನಿಮಗಿಲ್ಲ! ಅಮೆರಿಕ​ ಕೋರ್ಟ್​ನಿಂದ ಟ್ರಂಪ್​ ಸರ್ಕಾರಕ್ಕೆ ಭಾರೀ ಮುಖಭಂಗ | US Court

US Court: ಕಳೆದ ಕೆಲವು ತಿಂಗಳಷ್ಟೇ ಇತರೆ ದೇಶಗಳ ವಸ್ತುಗಳಿಗೆ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತೀಕಾರದ ಸುಂಕ ಸಮರ ಸಾರಿದ್ದರು. ಇದರಿಂದ ಭಾರತ ಸೇರಿದಂತೆ ಹಲವಾರು ದೇಶಗಳು ಇಕ್ಕಟ್ಟಿಗೆ ಸಿಲುಕಿತ್ತು. ಟ್ರಂಪ್​ ಸುಂಕ ಸುಮರದ ಬೆನ್ನಲ್ಲೇ ಜಾಗತಿಕ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳು, ಷೇರುಪೇಟೆ ಕುಸಿತ ಕಂಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಟ್ಯಾರಿಫ್​ಗೆ ರಿಲೀಫ್​ ಕೊಟ್ಟಿದ್ದ ಟ್ರಂಪ್​ ಸರ್ಕಾರಕ್ಕೆ ಇದೀಗ ಅಮೆರಿಕದ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯ ಖಡಕ್ ಎಚ್ಚರಿಕೆ ರವಾನಿಸಿದೆ.

ಈ ಮೂಲಕ ಟ್ರಂಪ್ ಸರ್ಕಾರ ಮತ್ತೊಂದು ಹಿನ್ನಡೆಯನ್ನು ಅನುಭವಿಸಿದೆ. 'ವಿಮೋಚನಾ ದಿನ'ದಂದೇ ಟ್ರಂಪ್ ಹಲವಾರು ದೇಶಗಳ ಮೇಲೆ ವಿಧಿಸಿದ ಸುಂಕಗಳ ಕುರಿತು ನ್ಯಾಯಾಲಯವು ಪ್ರಮುಖ ಹೇಳಿಕೆಗಳನ್ನು ಹಂಚಿಕೊಂಡಿದೆ. ಅಧ್ಯಕ್ಷರಿಗೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆರ್ಥಿಕ ನಿರ್ಬಂಧಗಳನ್ನು ವಿಧಿಸುವ ಅಧಿಕಾರವಿದೆಯೇ ಹೊರತು ಸುಖಾಸುಮ್ಮನೇ ಅಲ್ಲ ಎಂದು ಮ್ಯಾನ್‌ಹ್ಯಾಟನ್ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಕೋರ್ಟ್​ನ ಈ ಆದೇಶ ಸದ್ಯ ಟ್ರಂಪ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಡೊನಾಲ್ಡ್ ಟ್ರಂಪ್ ಸುಂಕಗಳ ಅನುಷ್ಠಾನವನ್ನು ಇದೀಗ ಯುಎಸ್ ಟ್ರೇಡ್ ಕೋರ್ಟ್ ತಡೆಹಿಡಿದಿದೆ. ಪ್ರತ್ಯೇಕ ಆದೇಶದಲ್ಲಿ, ಮ್ಯಾನ್‌ಹ್ಯಾಟನ್ ನ್ಯಾಯಾಲಯದ ಮೂವರು ನ್ಯಾಯಾಧೀಶರ ಸಮಿತಿಯು ತೀರ್ಪು ಪ್ರಕಟಿಸಿದೆ. ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿಯಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ಅಧ್ಯಕ್ಷರು ಜಾಗತಿಕ ದೇಶಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಬಹುದು ಎಂದು ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ. ವಿಶೇಷ ಅಧಿಕಾರಗಳೊಂದಿಗೆ ಸುಂಕಗಳನ್ನು ವಿಧಿಸುವುದು ಸರಿಯಲ್ಲ. ಇದು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಪೀಠವು ಒತ್ತಿ ಹೇಳಿದೆ.

ಆದಾಗ್ಯೂ, ಟ್ರಂಪ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಅಮೆರಿಕದ ಕಮಾಂಡರ್-ಇನ್-ಚೀಫ್ ಹೇಳಿದ್ದಾರೆ. ಈ ಸಂದರ್ಭದಲ್ಲಿ, ನ್ಯಾಯಾಲಯವು ಈ ಕಾನೂನನ್ನು ಆರ್ಥಿಕ ಒತ್ತಡದ ಸಾಧನವಾಗಿ ಬಳಸಲಾಗುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಅದೇ ಸಮಯದಲ್ಲಿ, ಟ್ರಂಪ್ ಸರ್ಕಾರ 'ಭಾರತ-ಪಾಕ್​ ಉದ್ವಿಗ್ನತೆ' ವಿಷಯವನ್ನು ಉಲ್ಲೇಖಿಸಿ, ನಮ್ಮ ಮಧ್ಯಸ್ಥಿಕೆಯಲ್ಲಿ ಎರಡು ದೇಶಗಳ ಸಮರ ನಿಂತಿತು ಎಂದು ಬಡಾಯಿ ಕೊಚ್ಚಿಕೊಳ್ಳಲು ಹೋಯಿತು. ಇದಕ್ಕೆ ಒಪ್ಪದ ನ್ಯಾಯಾಲಯ, ಕದನ ವಿರಾಮ ಒಪ್ಪಂದ ಕ್ರೆಡಿಟ್​ ತೆಗೆದುಕೊಳ್ಳುವುದು ಬೇಡ ಎಂದು ವಾದವನ್ನೂ ತಿರಸ್ಕರಿಸಿತು. ಟ್ರಂಪ್ ಆಡಳಿತವು ಅಧ್ಯಕ್ಷರ ಸುಂಕ ಅಧಿಕಾರಗಳನ್ನು ಎತ್ತಿಹಿಡಿಯುವಂತೆ ಸದ್ಯ ನ್ಯಾಯಾಲಯವನ್ನು ಕೋರಿದೆ.

ಕಾನೂನು ಸವಾಲು ಚೀನಾದೊಂದಿಗಿನ ವ್ಯಾಪಾರ ಒಪ್ಪಂದವನ್ನು ಬದಲಾಯಿಸುತ್ತದೆ ಮತ್ತು ಭಾರತ-ಪಾಕ್​ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ವಾದಿಸಿದ್ದಾರೆ. "ಸುಂಕ ಪ್ರಾಧಿಕಾರದಿಂದಾಗಿ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಕದನ ವಿರಾಮ ಒಪ್ಪಂದವನ್ನು ಸಾಧಿಸಲು ಸಾಧ್ಯವಾಯಿತು" ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಸುಂಕಗಳಿಗೆ ಸಂಬಂಧಿಸಿದಂತೆ ಹಲವಾರು ದೇಶಗಳೊಂದಿಗೆ ಪ್ರಸ್ತುತ ಮಾತುಕತೆಗಳು ನಡೆಯುತ್ತಿವೆ ಎಂಬ ಅಂಶದ ಬಗ್ಗೆ ಟ್ರಂಪ್ ಆಡಳಿತವು ನ್ಯಾಯಾಲಯದ ಗಮನ ಸೆಳೆಯಿತು. ಈ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಜುಲೈ 7ರ ಗಡುವನ್ನು ಹೊಂದಿದೆ ಮತ್ತು ಅಲ್ಲಿಯವರೆಗೆ ಇದನ್ನು ಬಹಳ ಸೂಕ್ಷ್ಮ ವಿಷಯವೆಂದು ಪರಿಗಣಿಸಲು ನ್ಯಾಯಾಲಯವನ್ನು ಕೋರಿದೆ.

ಆದಾಗ್ಯೂ, ಟ್ರಂಪ್ ಆಡಳಿತವು ಮಾಡಿದ ಎಲ್ಲಾ ವಾದ-ಹೇಳಿಕೆಗಳನ್ನು ನ್ಯಾಯಾಲಯ ತಿರಸ್ಕರಿಸಿರುವುದು ಗಮನಾರ್ಹ. ಐದು ಸಣ್ಣ ಯುಎಸ್ ಆಮದು ವ್ಯವಹಾರಗಳು ಮತ್ತು ಒರೆಗಾನ್ ಅಟಾರ್ನಿ ಜನರಲ್ ಡಾನ್ ರೇಫೀಲ್ಡ್ ನೇತೃತ್ವದ 13 ರಾಜ್ಯಗಳ ಒಕ್ಕೂಟವು ಸುಂಕಗಳ ವಿರುದ್ಧ ಮೊಕದ್ದಮೆ ಹೂಡಿದ್ದು, ಅವು ಕಾನೂನುಬಾಹಿರ, ಅಜಾಗರೂಕ ಮತ್ತು ಆರ್ಥಿಕವಾಗಿ ಹಾನಿಕಾರಕವೆಂದು ಹೇಳಿಕೊಂಡಿದೆ,(ಏಜೆನ್ಸೀಸ್).