ವಾಷಿಂಗ್ಟನ್: ಕೆನಡಾದ ಪ್ರಧಾನಮಂತ್ರಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಮತ್ತು ಕೆನಡಾದ ವಿಲೀನದ ಪ್ರಸ್ತಾವನೆ ಇಟ್ಟಿದ್ದಾರೆ.
‘ಕೆನಡಾದ ಸಾಕಷ್ಟು ಜನರು ತಮ್ಮ ರಾಷ್ಟ್ರ ಅಮೆರಿಕದ 51ನೇ ರಾಜ್ಯವಾಗುವುದನ್ನು ಇಷ್ಟ ಪಡುತ್ತಾರೆ. ಅಮೆರಿಕದ ರಾಜ್ಯಗಳಿಗೆ ವ್ಯಾಪಾರ ಕೊರತೆ ಮತ್ತು ಸಬ್ಸಿಡಿಗಳ ಅಗತ್ಯವಿಲ್ಲ. ಜಸ್ಟಿನ್ ಟ್ರುಡೊಗೆ ಇದರ ಅರಿವಿತ್ತು ಹಾಗಾಗಿ ಅವರು ರಾಜೀನಾಮೆ ನೀಡಿದ್ದಾರೆ. ಕೆನಡಾ ಅಮೆರಿಕದೊಂದಿಗೆ ವಿಲೀನವಾದರೆ ಯಾವುದೇ ಸುಂಕ ಇರುವುದಿಲ್ಲ ಮತ್ತು ತೆರಿಗೆ ಕಡಿಮೆಯಾಗುತ್ತದೆ. ರಷ್ಯಾ ಮತ್ತು ಚೀನಾದ ಅಪಾಯದಿಂದ ಕೆನಡಾ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಒಟ್ಟಿಗೆ ಇದು ಶ್ರೇಷ್ಠ ರಾಷ್ಟ್ರವಾಗಲಿದೆ’ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ 2017-21 ರವರೆಗೆ ಅಧ್ಯಕ್ಷರಾಗಿದ್ದಾಗಲೂ ಜಸ್ಟಿನ್ ಟ್ರುಡೊ ಜತೆಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಎರಡನೇ ಬಾರಿ ಟ್ರಂಪ್ ಜಯಗಳಿಸಿದ ಬಳಿಕ ಕೆನಡಾ ಗಡಿಯ ಮೂಲಕ ಅಮೆರಿಕದೊಳಗೆ ಅನಧಿಕೃತ ವಲಸಿಗರು ನುಸುಳುವುದನ್ನು ಮತ್ತು ಡ್ರಗ್ಸ್ ಕಳ್ಳಸಾಗಣೆಯನ್ನು ತಡೆಯದಿದ್ದರೆ, ಕೆನಡಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು.
ಕೆನಡಾ ಪ್ರಧಾನಿ ರೇಸ್ನಲ್ಲಿ ಅನಿತಾ ಆನಂದ್: ಕೆನಡಾದ ಪ್ರಧಾನಿ ಮತ್ತು ಲಿಬರಲ್ ಪಕ್ಷದ ನಾಯಕ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ನಂತರ ಪ್ರಧಾನಿ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿದೆ. ಈ ಪಟ್ಟಿಯಲ್ಲಿ ಭಾರತೀಯ ಮೂಲದ ವಕೀಲೆ, ರಾಜಕಾರಣಿ ಅನಿತಾ ಆನಂದ್ ಅವರ ಹೆಸರು ಮುಂಚೂಣಿಯಲ್ಲಿದೆ. 2019ರಲ್ಲಿ ರಾಜಕೀಯ ಪ್ರವೇಶಿಸಿದ್ದ ಅನಿತಾ ಇಂದಿರಾ ಆನಂದ್ ಅವರು ಅದೇ ವರ್ಷ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ, ಸಾರ್ವಜನಿಕ ಸೇವೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2021ರಲ್ಲಿ ಮರು ಆಯ್ಕೆಯಾಗಿದ್ದ ಅನಿತಾ ಅವರು ರಕ್ಷಣಾ ಸಚಿವರಾಗುವ ಮೂಲಕ ಕೆನಡಾ ಇತಿಹಾಸದಲ್ಲೇ ರಕ್ಷಣಾ ಸಚಿವ ಸ್ಥಾನ ಅಲಂಕರಿಸಿದ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಇತ್ತೀಚೆಗೆ ರಾಜಕೀಯ ಪ್ರಕ್ಷುಬ್ಧತೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ರಚನೆ ಮಾಡಲಾಗಿತ್ತು. ಅನಿತಾರನ್ನು ಖಜಾನೆ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. 57 ವರ್ಷದ ಅನಿತಾ ಆನಂದ್ ಅವರು ಕೆನಡಾದ ನೋವಾ ಸ್ಕಾಟಿಯಾದ ಕೆಂಟ್ವಿಲ್ಲೆಯಲ್ಲಿ ಜನಿಸಿದ್ದು. ಇವರ ತಂದೆ ಎಸ್.ವಿ. ಆನಂದ್ ಅವರು ತಮಿಳುನಾಡು ಮೂಲದವರು. ಆನಂದ್ ಅವರು ವೈದ್ಯರಾಗಿದ್ದರೆ, ಅನಿತಾ ಅವರ ತಾಯಿ ಸರೋಜ್ ಡಿ. ರಾವ್ ಅರಿವಳಿಕೆ ತಜ್ಞರಾಗಿದ್ದಾರೆ. ಅನಿತಾ ಆನಂದ್ ಅವರು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ವಕೀಲರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.