Raichur Lorry Accident: ಈರುಳ್ಳಿ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಬೆನ್ನಲ್ಲೇ, ಗಾಯಾಳುಗಳಿಗೆ ನೆರವಾಗುವ ಬದಲು ಜನರು ಈರುಳ್ಳಿ ಚೀಲಗಳನ್ನು ಹೊತ್ತೊಯ್ದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಕಪಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಈರುಳ್ಳಿ ತುಂಬಿದ್ದ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೆಲವರು ಗಾಯಗೊಂಡ ಚಾಲಕ ಮತ್ತು ಕ್ಲೀನರ್ಗೆ ನೆರವಾಗುವ ಬದಲು, ಲಾರಿಯಲ್ಲಿದ್ದ ಈರುಳ್ಳಿ ಚೀಲಗಳನ್ನು ಹೊತ್ತೊಯ್ಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಲವೇ 15ರಿಂದ 20 ನಿಮಿಷಗಳಲ್ಲಿ ಲಾರಿಯಲ್ಲಿದ್ದ ಈರುಳ್ಳಿ ಖಾಲಿಯಾಗಿದೆ ಎಂದು ವರದಿಯಾಗಿದೆ.
ಜನರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವ ಬದಲು ಇರುಳ್ಳಿ ಹೊತ್ತೊಯ್ದ ಜನರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈರುಳ್ಳಿ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಾನ್ವಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.